ಡಾ. ಅನುರಾಧಾ ಕುರುಂಜಿಯವರಿಗೆ “ಶತಶೃಂಗ” ಪ್ರಶಸ್ತಿ ಪ್ರದಾನ

0

ಅಂತಾರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚನ

        ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಸುಳ್ಯದ ಡಾ. ಅನುರಾಧಾ ಕುರುಂಜಿಯವರಿಗೆ ಸ್ವರ್ಣಭೂಮಿ ಫೌಂಡೇಶನ್ ಕೋಲಾರದವರು ಕೊಡಮಾಡಿದ ಪ್ರತಿಷ್ಠಿತ  "ಶತ ಶೃಂಗ”  ಪ್ರಶಸ್ತಿಯನ್ನು ಎಪ್ರಿಲ್ 11ರಂದು ಪ್ರದಾನ ಮಾಡಲಾಯಿತು. 

       ಕಾಸರಗೋಡು ನುಲ್ಲಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ ಹಾಗೂ ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ "ಕೇರಳ -ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವ 2024 ರಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುರಾಣ ಪ್ರಸಿದ್ಧ ಶತಶೃಂಗ ಪರ್ವತ ಶ್ರೇಣಿಗಳಿರುವ  ಚಿನ್ನದ ನಾಡು ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ನವರು ಪ್ರತೀ ವರ್ಷ ಕೊಡಮಾಡುವ ಪ್ರತಿಷ್ಠಿತ “ಶತಶೃಂಗ” ಪ್ರಶಸ್ತಿಯನ್ನು ಈ ಬಾರಿ ಕೇರಳದ ನಾಲ್ವರು ಹಾಗೂ ಕರ್ನಾಟಕದ ಇಬ್ಬರಿಗೆ ನೀಡಿ ಗೌರವಿಸಿದರು. 

           ಡಾ. ಅನುರಾಧಾ ಕುರುಂಜಿಯವರ ಶೈಕ್ಷಣಿಕ, ಸಾಹಿತ್ಯಕ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಮಾಡಿದ ಸಾಧನೆಗಾಗಿ ನೀಡಿದ ಈ ಪ್ರಶಸ್ತಿಯನ್ನು ಎಡನೀರು ಮಠದ ಮಠಾಧಿಪತಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಪ್ರದಾನ ಮಾಡಿದರು.  ಸಮಾರಂಭದಲ್ಲಿ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಭವನ ಅಧ್ಯಕ್ಷ ವಾಮನ್ ರಾವ್ ಬೇಕಲ್, ಶ್ರೀಮತಿ ಸಂಧ್ಯಾರಾಣಿ ಟೀಚರ್, ಸ್ವರ್ಣಭೂಮಿ ಫೌಂಡೇಶನ್ ಅಧ್ಯಕ್ಷ ಬಿ ಶಿವಕುಮಾರ್ ಕೋಲಾರ, ಡಾ ಶರಣಪ್ಪ ಕೋಲಾರ, ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಯಿಕಾಪು, ಎ ಆರ್ ಸುಬ್ಬಯ್ಯ ಕಟ್ಟೆ, ಡಾ ಜಯಪ್ರಕಾಶ್ ನಾರಾಯಣ ತೋಟ್ಟೆತೋಡಿ, ರಾಧಾಕೃಷ್ಣ ಕೆ ಉಳಿಯತಡ್ಕ, ಪ್ರೊ ಎ ಶ್ರೀನಾಥ್, ವಿಶಾಲಾಕ್ಷ ಪುತ್ರಕಳ, ವಿ ಬಿ  ಕುಳಮರ್ವ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಧದಲ್ಲಿ ಹಮ್ಮಿಕೊಂಡ ಅಂತಾರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಡಾ. ಅನುರಾಧಾ ಕುರುಂಜಿಯವರು ಸ್ವರಚಿತ ಕವನವನ್ನು ವಾಚಿಸಿದರು.