ಬೊಳುಬೈಲು: ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರತ ಸಂಜೀವಿನಿ ಸದಸ್ಯೆ ಹಾಗೂ ಗ್ರಾ.ಪಂ. ಸದಸ್ಯನ ಮಧ್ಯೆ ಮಾತಿನ ಚಕಮಕಿ

0

ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರತ ಸಂಜೀವಿನಿ ಒಕ್ಕೂಟದ ಸದಸ್ಯೆ ಹಾಗೂ ಸ್ಥಳೀಯ ಗ್ರಾ.ಪಂ. ಸದಸ್ಯನ ಮಧ್ಯೆ ಮತಪ್ರಚಾರ ಕುರಿತು ಪರಸ್ಪರ ಮಾತಿನ ಚಕಮಕಿ ನಡೆದು, ಪೊಲೀಸ್ ದೂರು ಹೋದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ, ಸಂಜೀವಿನಿ ಒಕ್ಕೂಟದ ಮಹಿಳೆಯನ್ನು ಮತದಾನ ಕೇಂದ್ರದಿಂದ ಹೊರಗೆ ಕಳುಹಿಸಿದ ಘಟನೆ ಜಾಲ್ಸೂರು ಗ್ರಾಮದ ಬೊಳುಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮತದಾನ ಕೇಂದ್ರದಲ್ಲಿ ಸಂಭವಿಸಿದೆ.

ಜಾಲ್ಸೂರು ಗ್ರಾಮ ಪಂಚಾಯತಿಯ ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವೇದಾ ಶೆಟ್ಟಿ ನೆಕ್ರಾಜೆ ಅವರು ತಾಲೂಕು ಪಂಚಾಯತಿ ಅಧೀನದಲ್ಲಿ ಚುನಾವಣೆಯಲ್ಲಿ ಮತದಾರರ ಚೀಟಿ ವಿತರಿಸುವ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಈ ವೇಳೆ ವೇದ ಅವರು ಒಂದು ಪಕ್ಷದ ಪರವಾಗಿ ಮತಹಾಕುವಂತೆ ಮತದಾರರಿಗೆ ಹೇಳುತ್ತಿದ್ದಾರೆ ಎಂದು ಜಾಲ್ಸೂರು ಗ್ರಾ.ಪಂ. ಸದಸ್ಯ ಮಜೀಬ್ ಪೈಚಾರು ಮತ್ತಿತರರು ಬಂದು ಅವರನ್ನು ಪ್ರಶ್ನಿಸಿ, ಪರಸ್ಪರ ಮಾತಿನ ಚಕಮಕಿ ನಡೆಯಿತೆನ್ನಲಾಗಿದೆ.
ವೇದಾ ಶೆಟ್ಟಿ ಅವರು ಪಕ್ಷದ ಪರವಾಗಿ ಮತದಾನ ಕೇಂದ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಮುಜೀಬ್ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮತದಾನ ಕೇಂದ್ರಕ್ಕೆ ಆಗಮಿಸಿ, ವೇದಾ ಶೆಟ್ಟಿ ಅವರನ್ನು ಮತದಾನ ಕೇಂದ್ರದಿಂದ ಹೊರಗೆ ಕಳುಹಿಸಿರುವುದಾಗಿ ತಿಳಿದುಬಂದಿದೆ.

ಈ ಕುರಿತು ವೇದಾ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ ನಾನು ಜಾಲ್ಸೂರು ಗ್ರಾಮದ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆಯಾಗಿದ್ದು, ತಾಲೂಕು ಪಂಚಾಯತಿ ಇ.ಒ. ಅವರು ನೀಡಿದ ಚುನಾವಣಾ ಕರ್ತವ್ಯ ಪತ್ರ ಇದೆ. ಹಾಗಾಗಿ ಎಲ್ಲಾ ಮತದಾರರಿಗೆ ಚುನಾವಣಾ ಚೀಟಿ ವಿತರಿಸುವ ಕೆಲಸ ಹಾಗೂ ಕುಡಿಯುವ ನೀರು ಕೊಡುತ್ತಿದ್ದೆ. ಯಾವುದೇ, ಪಕ್ಷದ ಪರವಾಗಿ ಪ್ರಚಾರ ಮಾಡಿಲ್ಲ. ಆದರೆ ಗ್ರಾ.ಪಂ. ಸದಸ್ಯರಾದ ಮುಜೀಬ್ ಅವರು ಬಂದು ನನ್ನ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿದ್ದೂ ಅಲ್ಲದೆ, ಪೊಲೀಸ್ ಕಂಪ್ಲೇಟ್ ನೀಡಿ ಕರ್ತವ್ಯ ನಿರತ ಸಿಬ್ಬಂದಿಗೆ ಎಲ್ಲರ ಮುಂದೆ ಅವಮಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತಂತೆ ಗ್ರಾ.ಪಂ. ಸದಸ್ಯ ಮುಜೀಬ್ ಪೈಚಾರು ಅವರಲ್ಲಿ ಕೇಳಿದಾಗ ವೇದಾ ಶೆಟ್ಟಿ ಅವರು ಮತದಾನ ಕೇಂದ್ರದ ಬಳಿ ಮತದಾ‌ನಕ್ಕೆ ಬಂದ ಮತದಾರರಲ್ಲಿ ಒಂದು ಪಕ್ಷದ ಪರವಾಗಿ ಮತಹಾಕುವಂತೆ ಹೇಳುತ್ತಿದ್ದರು. ಅಲ್ಲಿ ಯಾರಿಗೂ ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡುವ ಹಕ್ಕು ಇಲ್ಲ. ಹಾಗಾಗಿ ನಾನು ಪೊಲೀಸ್ ಕಂಪ್ಲೇಟ್ ನೀಡಿದ್ದೇನೆ ಎಂದು ತಿಳಿಸಿದ್ದಾರೆ.