ಅರಂತೋಡು: ಮೋಟರ್ ಪಂಪಿನ ಪುಟ್ ಬಾಲ್ ಸರಿಪಡಿಸಲೆಂದು ಬಾವಿಗೆ ಇಳಿದ ಯುವಕನ ತಲೆಗೆ ಕಲ್ಲು ಜರಿದು ಬಿದ್ದು ಗಂಭೀರ ಗಾಯ

0

ಸುಳ್ಯಕ್ಕೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ವೇಳೆ ಕಬಕದಲ್ಲಿ ಅಂಬ್ಯುಲೆನ್ಸ್ ಅಪಘಾತ

ಕಬಕದಿಂದ ಮಂಗಳೂರಿಗೆ ಸಾಗಿಸುವ ಮಾರ್ಗಮಧ್ಯೆ ಕೈಕೊಟ್ಟ ಬದಲಿ ಅಂಬ್ಯುಲೆನ್ಸ್

ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ

ಮನೆಯ ಬಾವಿಗೆ ಅಳವಡಿಸಿದ್ದ ಮೋಟಾರ್ ಪಂಪಿನ ಪುಟ್ ಬಾಲ್ ಸರಿಪಡಿಸಿ, ಹಗ್ಗದ ಸಹಾಯದಿಂದ ಮೇಲೆ ಬರುತ್ತಿದ್ದ ಯುವಕನ ತಲೆಗೆ ಬಾವಿಯ ಬದಿಯಿದ್ದ ಕಲ್ಲು ಕುಸಿದು ಯುವಕನ ಸಮೇತ ಬಾವಿ ನೀರಿಗೆ ಬಿದ್ದ ಹಾಗೂ ತಲೆಗೆ ಗಂಭೀರವಾಗಿ ಗಾಯಗೊಂಡ ಯುವಕನನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕಬಕದಲ್ಲಿ ಅಂಬ್ಯುಲೆನ್ಸ್ ಗೆ ಕಾರು ಢಿಕ್ಕಿ ಹೊಡೆದುದಲ್ಲದೇ, ಗಾಯಾಳು ಯುವಕನನ್ನು ಮಂಗಳೂರಿಗೆ ಸಾಗಿಸಲು ಬಂದ ಬದಲಿ ಅಂಬ್ಯುಲೆನ್ಸ್ ಮಾರ್ಗ ಮಧ್ಯೆ ಕೈಕೊಟ್ಟ ಘಟನೆ ಮೇ.2ರಂದು ರಾತ್ರಿ ಸಂಭವಿಸಿದೆ.

ಅರಂತೋಡು ಗ್ರಾಮದ ಉಳುವಾರು ಯಶವಂತ ಗೌಡರ ಪುತ್ರ ತರುಣ್ ಎಂಬ ಯುವಕ ಮನೆಯ ಬಾವಿಯಲ್ಲಿ ಮೋಟಾರ್ ಪಂಪಿನ ಪುಟ್ ಬಾಲ್ ಸರಿಪಡಿಸಲು ಇಳಿದು ಹಗ್ಗದ ಸಹಾಯದಿಂದ ಮೇಲೆ ಬರುತ್ತಿದ್ದ ಸಂದರ್ಭದಲ್ಲಿ ಬಾವಿಯ ಬದಿಯಿದ್ದ ಕಲ್ಲು ಕುಸಿದು ಯುವಕನ ತಲೆಗೆ ಬಿದ್ದ ಪರಿಣಾಮವಾಗಿ ಯುವಕ ಬಾವಿ ನೀರಿಗೆ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡರೆನ್ನಲಾಗಿದೆ.

ಕೂಡಲೇ ಅಲ್ಲಿದ್ದವರು ಬಾವಿಗೆ ಇಳಿದು ಯುವಕನನ್ನು ಮೇಲೆತ್ತಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೆನ್ನಲಾಗಿದೆ. ಆದರೆ ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಕೆವಿಜಿ ಆಸ್ಪತ್ರೆಯ ಅಂಬ್ಯುಲೆನ್ಸ್ ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಪುತ್ತೂರಿನ ಕಬಕ ಎಂಬಲ್ಲಿ ಮುಂಭಾಗದಿಂದ ಬಂದ ಕಾರು ಅಂಬ್ಯುಲೆನ್ಸ್ ಗೆ ಢಿಕ್ಕಿ ಹೊಡೆದಿದ್ದು, ಅಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತೆನ್ನಲಾಗಿದೆ. ಕೂಡಲೇ ಬದಲಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಗಾಯಾಳು ಯುವಕನನ್ನು ಮಂಗಳೂರಿಗೆ ಸಾಗಿಸುವ ವೇಳೆ ಕಲ್ಲಡ್ಕ ಎಂಬಲ್ಲಿ ಅಂಬ್ಯುಲೆನ್ಸ್ ಕೆಲ ಸಮಯ ಕೈಕೊಟ್ಟಿದ್ದು, ಬಳಿಕ ಯುವಕನನ್ನು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.