ಸಾಹಿತಿ ಟಿ.ಜಿ.ಮುಡೂರು ವ್ಯಕ್ತಿತ್ವ ಮತ್ತು ಕೃತಿ ಪರಿಚಯ ಕಾರ್ಯಕ್ರಮ

0

ಸಂಧ್ಯಾ ರಶ್ಮಿ ಸಾಹಿತ್ಯ ಸಂಘ ಮತ್ತು ಕಸಾಪ ಸುಳ್ಯ ಹೋಬಳಿ ಘಟಕದಿಂದ ಆಯೋಜನೆ

ಖ್ಯಾತ ಸಾಹಿತಿ ದಿ. ಟಿ.ಜಿ.ಮುಡೂರು ಅವರ ವ್ಯಕ್ತಿತ್ವ ಮತ್ತು ಕೃತಿ ಪರಿಚಯ ಹಾಗೂ ಸಂವಾದ ಕಾರ್ಯಕ್ರಮವು ಸುಳ್ಯದ ಸಂಧ್ಯಾ ರಶ್ಮಿ‌ ಸಾಹಿತ್ಯ ಸಂಘ ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಹೋಬಳಿ‌ ಘಟಕದ ವತಿಯಿಂದ ಮೇ.11 ರಂದು ಸಂಧ್ಯಾರಶ್ಮಿ‌ ಸಭಾಂಗಣದಲ್ಲಿ ನಡೆಯಿತು.

ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ್ ಅವರು ಅಧ್ಯಕ್ಷತೆ ವಹಿಸಿದ್ದರು.

ಮುಡೂರರ ವ್ಯಕ್ತಿತ್ವ ಪರಿಚಯ ಮಾಡಿದ ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆಯವರು, ಮುಡೂರರು ಸಾಹಿತ್ಯ ಮತ್ತು ಸಮಾಜವನ್ನು ಬೇರೆ ಬೇರೆಯಾಗಿ ನೋಡಿದವರಲ್ಲ. ತನ್ನ ಸುತ್ತಮುತ್ತಲಿನ ಆಗುಹೋಗುಗಳಿಗೆ ತಕ್ಷಣ ಸ್ಪಂದಿಸುತ್ತಾ, ಪ್ರತಿಕ್ರಿಯಿಸುತ್ತಾ ಸಾಮಾಜಿಕ ಪ್ರತಿ ಬದ್ಧತೆಯ ಗಟ್ಟಿ ನಿಲುವನ್ನು ಕಾಪಿಟ್ಟವರು ಎಂದರು.

ಮುಡೂರರ ಗದ್ಯ ಸಾಹಿತ್ಯದ ಕುರಿತು ಮಾತನಾಡಿದ ಜೇಸಿ ವಲಯ ತರಬೇತುದಾರರಾದ ಶಶಿಧರ ಪಳಂಗಾಯ ಅವರು, ಮುಡೂರರ ಗದ್ಯಗಳು ಸಾರ್ವಕಾಲಿಕ ಮೌಲ್ಯವುಳ್ಳಂತವುಗಳು. ಅವರ ಗದ್ಯಗಳ ಓದುವಿಕೆಯಿಂದ ಹೊಸ ತಲೆಮಾರಿಗೆ ಹೊಸ ಯೋಚನಾ ಶಕ್ತಿ ಬರಲಿದೆ ಎಂದು ಅಭಿಪ್ರಾಯಪಟ್ಟರು.

ಮುಡೂರರ ಪದ್ಯ ಸಾಹಿತ್ಯದ ಕುರಿತು ಮಾತನಾಡಿದ ಹಿರಿಯ ಸಾಹಿತಿ ಕುತ್ಯಾಳ ನಾಗಪ್ಪ ಗೌಡರು, ಮುಡೂರರ ಬರಹಗಳು ದಲಿತರ, ಶೋಷಿತರ ಪರವಾಗಿ ಧ್ವನಿ ಎತ್ತಿದೆ.‌ ಅವರ ಪದ್ಯಗಳು ಕನ್ನಡ ಸಾರಸ್ವತ ಲೋಕದಲ್ಲಿ ಗಟ್ಟಿ ಸ್ಥಾನ ಪಡೆಯುವ ಮೌಲ್ಯ ಉಳ್ಳಂತವುಗಳು ಎಂದರು.

ಸಂವಾದದಲ್ಲಿ ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ, ಟಿ.ಜಿ.ಮುಡೂರರ ಪುತ್ರ ಸವಿತಾರ ಮುಡೂರು ಅಭಿಪ್ರಾಯ ಮಂಡಿಸಿದರು.

ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಸುಳ್ಯ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಡಾ. ಎಸ್.ರಂಗಯ್ಯ ಮುಖ್ಯ ಅತಿಥಿಗಳಾಗಿದ್ದರು.

ಕ.ಸಾ.ಪ. ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಸ್ವಾಗತಿಸಿದರು. ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಉಪಾಧ್ಯಕ್ಷ ರಾಮಚಂದ್ರ ಪಲ್ಲತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ತೇಜಸ್ವಿನಿ ಕಿರಣ್ ನೀರ್ಪಾಡಿ ವಂದಿಸಿದರು. ಗಾಯಕಿ ಶ್ರೀಮತಿ ಗಿರಿಜಾ ಎಂ.ವಿ. ಆಶಯ ಗೀತೆ ಹಾಗೂ ಮುಡೂರರ ಪದ್ಯಗಳನ್ನು ಹಾಡಿದರು.