ಏಕಕಾಲದಲ್ಲಿ ಐದು ಪಾಷಾಣಮೂರ್ತಿ ದೈವಗಳ ಹರಕೆಯ ನೇಮ
ಕುಡೆಕಲ್ಲು ಮನೆತನದ ಕುಟುಂಬಸ್ಥರ ಪರವಾಗಿ ಐದು ಪಾಷಾಣಮೂರ್ತಿ ದೈವದ ಹರಕೆಯ ಕೋಲವುಮೇ.12 ರಂದು ರಾತ್ರಿ ಕುಡೆಕಲ್ಲು ಐನ್ ಮನೆಯ ತರವಾಡು ದೈವಸ್ಥಾನದ ಎದುರಿನ ಪಾಷಾಣಮೂರ್ತಿ ದೈವದ ಮಜಲಿನಲ್ಲಿ ನಡೆಯಿತು.
ಕಳೆದ ಕೆಲ ತಿಂಗಳ ಹಿಂದೆ ನಡೆದ ಕುಟುಂಬದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಹಿರಿಯರು ಕೋಲ ನಡೆಸುವುದಾಗಿ ಹರಕೆ ಹೇಳಿಕೊಂಡಿದ್ದರು. ಆದರೆ ದೈವದ ಕೋಲ ನಡೆಯದೆ ಬಾಕಿ ಇರುವುದಾಗಿ ಕಂಡು ಬಂದಿದ್ದು ದೈವಜ್ಞರ ಸೂಚನೆಯಂತೆ ಪರಿಹಾರವಾಗಿ ಕುಟುಂಬಸ್ಥರು ಸೇರಿ ಐದು ದೈವಗಳ ಕೋಲ ನಡೆಸಲು ನಿರ್ಧರಿಸಿದ್ದರು. ಅದರಂತೆ ಐದು ದೈವಗಳ ನೇಮವು ಏಕಕಾಲದಲ್ಲಿ ನಡೆಯಿತು. ಇತಿಹಾಸದ ಪ್ರಕಾರ ಐದು ದೈವದ ಕೋಲವು ಏಕಕಾಲದಲ್ಲಿ ನಡೆದಿರುವುದು ಪ್ರಥಮವಾಗಿದೆ ಎಂದು ಕುಟುಂಬದ ಹಿರಿಯರು ತಿಳಿಸಿದರು.
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು, ಆಡಳ್ತೆದಾರರು ಹಾಗೂ ಕುಟುಂಬಸ್ಥರು ಮತ್ತು ಸ್ಥಳೀಯ ಭಕ್ತಾದಿಗಳು ಭಾಗವಹಿಸಿದ್ದರು. ಆಗಮಿಸಿದ ಎಲ್ಲರಿಗೂ ರಾತ್ರಿ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆಯು ನಡೆಯಿತು.