-ನಿರೀಕ್ಷಾ ಸುಲಾಯ ಮೇನಾಲ
ನಾವು ಎಷ್ಟು ಕೊಡುತ್ತೇವೆ ಎಂಬುದು ಮುಖ್ಯವಲ್ಲ. ಆದರೆ ಕೊಡುವುದರಲ್ಲಿ ಎಷ್ಟು ಪ್ರೀತಿಯನ್ನು ಬೆರೆಸಿ ಕೊಡುತ್ತೇವೆ ಎಂಬುದು ಮುಖ್ಯವಾಗುತ್ತದೆ'' ಅಂತಹ ಅನುಭವ ಹೊಂದಿದ ವ್ಯಕ್ತಿ ದಿ| ನವೀನ್ ಕುಮಾರ್ ರೈ ಮೇನಾಲರವರು. ಮೇನಾಲ ಎಂಬ ಹೆಸರು ಕೇಳಿದೊಡನೆ ಎಲ್ಲರೂ ನನ್ನ ಜತೆ ಸಹಜವಾಗಿ ಕೇಳುವ ಪ್ರಶ್ನೆಯೆಂದರೆ ನವೀನ್ ಅಣ್ಣನ ಮೇನಾಲವೇ? ಎಂದು. ಆಗ ನಾನು ಸಂತೋಷದಿಂದ ಹೌದು ಎನ್ನುತ್ತಾ.. ಅವರೇ ನನ್ನ ಮಾಮ ಎನ್ನುತ್ತಿದ್ದೆ. ನವೀನ್ ರೈಯವರು ಯಾರನ್ನು ನಿರ್ಲಕ್ಷಿಸಿದವರಲ್ಲ. ಎಲ್ಲರಿಗೂ ಸಮಾನವಾದ ಬೆಲೆಯನ್ನು ಕೊಡುತ್ತಿದ್ದ ವ್ಯಕ್ತಿ. ಪ್ರಪಂಚ ಹೇಗೆ ಅಂದರೆ ನೋವು ತನಗಾದರೆ ಮಾತ್ರ ಅದು ನೋವು ಹೊರತು ನೋವು ಬೇರೆಯವರಿಗಾದರೆ ಅದು ಹಣೆಬರಹ ಎನ್ನುತ್ತಾರೆ. ಎಲ್ಲರ ನೋವು - ನಲಿವುಗಳಿಗೆ ಮೊದಲಿಗನಾಗಿ ಸ್ಪಂದಿಸುವವರು ನವೀನ್ ರೈಗಳು. ಅವರ ಜೀವನದಲ್ಲೂ ನಾನು ನೋಡಿದ ಮಟ್ಟಗೆ ಯಶಸ್ಸು ಸುಲಭದಲ್ಲಿ ಸಿಗಲಿಲ್ಲ. ಪರಿಶ್ರಮ ಪಟ್ಟೇ ಅವರು ಹೆಸರು ಮಾಡಿದ್ದಾರೆ. ನನ್ನ ಜೀವನದಲ್ಲಿ ಅವರೊಂದಿಗೆ ನಡೆದ ಒಂದು ಅಮೂಲ್ಯವಾದ ಸಂಭಾಷಣೆಯನ್ನು ಹೇಳಬಯಸುತ್ತೇನೆ. ಅವರು ಇಹ ಲೋಕವನ್ನು ತ್ಯಜಿಸುವ ಒಂದು ತಿಂಗಳ ಮೊದಲು ನಮ್ಮ ಎಂಟನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶದ ಸಮಯ. ಆ ದಿನ ಅವರೊಂದು ಮಾತನ್ನು ಹೇಳುತ್ತಾರೆ.
ನಾವು ಜೀವನದಲ್ಲಿ ಹೀಗೆ ಮುಂದೆ ಮುಂದೆ ಸಾಧನೆ ಮಾಡುತ್ತಾ ಹೋಗುವಾಗ ಆ ಪಯಣದಲ್ಲಿ ತುಂಬಾ ಎತ್ತರ ಬೆಳೆಯಬೇಕು. ನಮ್ಮ ಈಗಿನ ಫಲಿತಾಂಶವನ್ನು ಮುಂದಿನ ವರ್ಷಗಳಲ್ಲಿ ಹೆಚ್ಚಿಸಬೇಕೇ ಹೊರತು ಕಡಿಮೆಯಾಗಿಸಬಾರದೆಂದು” ಇದು ನನಗೆ ಆಗಾಗ ನೆನಪಾಗುವುದುಂಟು.
ಮೇನಾಲದ ಬೆನ್ನೆಲುಬಾಗಿದ್ದ ನವೀನ್ ರೈಯವರ ಅಗಲಿಕೆಯ ಒಂದು ವರ್ಷದ ಸ್ಮರಣಾರ್ಥವಾಗಿ ಅವರ ಅಭಿಮಾನಿಗಳು ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸಿ, ಅದರಲ್ಲಿ ಭಾಗವಹಿಸಿ ಅವರ ನೆನಪುಗಳನ್ನು ಮೆಲುಕು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಿ ಹುಟ್ಟಬೇಕು,.. ಎಲ್ಲಿ ಸಾಯಬೇಕು ಎಂಬುದು ನಮ್ಮ ಕೈಯಲ್ಲಿ ಇರುವುದಿಲ್ಲ. ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತದೆ. ಅದೇ ರೀತಿ ನವೀನ್ ಮಾವ ಅಗಲಿದರೂ ಎಲ್ಲರ ಹೃದಯದಲ್ಲಿ ಸದಾ ಚಿರಸ್ಥಾಯಿಯಾಗಿ ಇರುತ್ತಾರೆ.
-ನಿರೀಕ್ಷಾ ಸುಲಾಯ ಮೇನಾಲ