ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರೊಬ್ಬರು ಬಂಡಿರಥ ನೀಡಿದ್ದು ಅದನ್ನು ಇಂದು ಸಮರ್ಪಿಸಲಾಯಿತು.
ಪ್ರಸ್ತುತ ಅಮೇರಿಕಾದ ಟೆಕ್ಸಾಸ್‌ನ ನಿವಾಸಿ ಮತ್ತು ಅಲ್ಲಿನ ಉದ್ಯೋಗಿ ಮೂಲತಃ ಆಂದ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಪಾಲಕ್ಕೋಡ್‌ನ ಸಾಯಿ ಶ್ರೀನಿವಾಸ್ ರಾಮಲಿಂಗೇಶ್ವರ ರಾವ್ ವೇಮೂ ಶ್ರೀ ದೇವರಿಗೆ ನೂತನ ಬಂಡಿ ರಥವನ್ನು ಸೇವಾರೂಪದಲ್ಲಿ ನೀಡಿದ್ದಾರೆ. ವೈದಿಕ ವಿದಿವಿಧಾನಗಳ ಮೂಲಕ ಮೇ.27 ಬಂಡಿರಥವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಾಯಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈದಿಕ ವಿದಿ ವಿಧಾನಗಳನ್ನು ನೆರವೇರಿಸಿದರು.
ಮೇ.,26 ಸೇವಾರ್ಥಿಗಳ ಉಪಸ್ಥಿತಿಯಲ್ಲಿ ರಥಸಮರ್ಪಣಾ ಕಾರ್ಯದ ಅಂಗವಾಗಿ ವಾಸ್ತುಹೋಮ ಮತ್ತು ರಾಕ್ಷೋಘ್ನ ಹೋಮ ನೆರವೇರಿತು. ಶ್ರೀ ದೇವಳದಲ್ಲಿ ಗಣಹೋಮ, ರಥಮಂತ್ರ ಹೋಮ ನಡೆಯಿತು.ನಂತರ ರಥಕ್ಕೆ ಕಲಶ ಪ್ರತಿಷ್ಠೆ ನೆರವೇರಿತು.ಬಳಿಕ ಕಲಶಾಭಿಷೇಕ ಸಂಪನ್ನವಾಯಿತು. ಅಂತಿಮವಾಗಿ ಪ್ರಧಾನ ಅರ್ಚಕರು ನೂತನ ರಥಕ್ಕೆ ಪೂಜೆ ನೆರವೇರಿಸಿದರು.ಬಳಿಕ ಶ್ರೀ ದೇವರಿಗೆ ನೂತನ ಬಂಡಿರಥವನ್ನು ಸಮರ್ಪಿಸಿ ಪ್ರಸಾದ ವಿತರಣೆ ನಡೆಯಿತು.
ಸೇವಾಕತೃಗಳಾದ ಸಾಯಿ ಶ್ರೀನಿವಾಸ್ ರಾಮಲಿಂಗೇಶ್ವರ ರಾವ್ ವೇಮೂ, ಅವರ ಪತ್ನಿ ಮೌನಿತಾ ವೇಮೂ, ಪುತ್ರಿ ಅನ್ವಿತಾ ರಿಯಾಶ್ರೀ ವೇಮೂ, ತಂದೆ ಸೂರ್ಯನಾರಾಯಣ ರಾವ್ ವೇಮೂ, ಮಾವ ಚಂದ್ರಶೇಖರ ರಾಜು ದಾಟ್ಲ, ಅವರ ಪತ್ನಿ ಶಾರದಾ ದಾಟ್ಲ ವೈದಿಕ ವಿದಿವಿಧಾನಗಳಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಓ ಯೇಸುರಾಜ್, ದಾನಿಗಳ ಆಪ್ತರಾದ ಮೋಹನದಾಸ ರೈ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಶ್ರೀ ದೇವಳದ ಗಣೇಶ್ ಆಚಾರ್ಯ, ಬಸವನಮೂಲೆ ಬಸವೇಶ್ವರ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ್ ಸ್ಕಂಧ, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರುಗಳಾದ ಶ್ರೀವತ್ಸ ಬೆಂಗಳೂರು, ವನಜಾ.ವಿ.ಭಟ್, ಶೋಭಾ ಗಿರಿಧರ್ ಉಪಸ್ಥಿತರಿದ್ದರು.