ಪರಿಸರ ದಿನಾಚರಣೆ ಪ್ರಯುಕ್ತ ಕೇರ್ಪಳದಲ್ಲಿ ಗಿಡ ನೆಡುವ ಕಾರ್ಯಕ್ರಮ
“ಪರಿಸರ ರಕ್ಷಣೆ ಎನ್ನುವುದು ಅರಣ್ಯ ಇಲಾಖೆಯ ಜವಾಬ್ದಾರಿ ಎಂದು ಭಾವಿಸುವವರಿದ್ದಾರೆ. ಹಾಗಲ್ಲ – ಪ್ರತಿಯೊಬ್ಬರೂ ತಮ್ಮ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ತಮ್ಮ ಸುತ್ತಮುತ್ತಲ ಪರಿಸರ ಬೆಳೆಸಲು ಕೊಡುಗೆ ನೀಡಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ಸುಳ್ಯ ವಲಯಾರಣ್ಯಾಧಿಕಾರಿ ಎನ್.ಮಂಜುನಾಥ್ ಹೇಳಿದ್ದಾರೆ.
ಕೇರ್ಪಳ ಪಯಸ್ವಿನಿ ಯುವಕ ಮಂಡಲ ಇದರ ಆಶ್ರಯದಲ್ಲಿ ಕೇರ್ಪಳ ಸ.ಹಿ.ಪ್ರಾ. ಶಾಲೆ ಹಾಗೂ ಅಂಗನವಾಡಿ ವಠಾರದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
“ಪರಿಸರ ದಿನಾಚರಣೆ ದಿನದಂದು ಮಾತ್ರ ಗಿಡ ನೆಡುವ ಕೆಲಸ ಆಗಬಾರದು. ಇದು ಪ್ರತಿ ನಿತ್ಯವೂ ಆಗಬೇಕು. ಗಿಡ ಬೆಳೆಸಬೇಕು” ಎಂದವರು ಹೇಳಿದರು.
ಪರಿಸರ ಪ್ರೇಮಿ ಚಂದ್ರಪ್ರಕಾಶ್ ಕೇರ್ಪಳ ಮಾತನಾಡಿ, “ಪ್ರತಿಯೊಬ್ಬರು ವರ್ಷಕ್ಕೊಂದು ಗಿಡನೆಟ್ಟು ಅದು ಬೆಳೆಯುವಂತೆ ಮಾಡಬೇಕು. ಅವರವರ ಹುಟ್ಟಿದ ದಿನದಂದು ಆದರೂ ಗಿಡ ನೆಟ್ಟುಬೆಳೆಸುವ ಸಂಕಲ್ಪ ಮಾಡಿ” ಎಂದವರು ಹೇಳಿದರು.
ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ ಅಧ್ಯಕ್ಷತೆ ವಹಿಸಿದ್ದರು.
ನ.ಪಂ ಸದಸ್ಯ ಸುಧಾಕರ ಕುರುಂಜಿಭಾಗ್, ಸುಳ್ಯಸಿ.ಎ. ಬ್ಯಾಂಕ್ ನಿರ್ದೇಶಕ ಶಿವರಾಮ ಕೇರ್ಪಳ, ಕೇರ್ಪಳ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೊನ್ನಮ್ಮ, ಯುವಕ ಮಂಡಲದ ಪದಾಧಿಕಾರಿಗಳಾದ ಮನೋಜ್ ಕೇರ್ಪಳ, ಅಜಿತ್ ಕುರುಂಜಿ, ಅಜಿತ್ ಕೇರ್ಪಳ, ಲಕ್ಷ್ಮೀಶ್ ದೇವರಕಳಿಯ, ರಘು ಕೇರ್ಪಳ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷರು ಮೊದಲಾದವರಿದ್ದರು.
ಕಾರ್ಯದರ್ಶಿ ಭರತ್ ಕುರುಂಜಿ ವಂದಿಸಿದರು.