ಕನಕಮಜಲಿನಲ್ಲಿ ಮೊಗೇರ ಭವನಕ್ಕೆ ಜಾಗ ನೀಡುವಂತೆ ತಹಶೀಲ್ದಾರ್ ರಿಗೆ ಮನವಿ
ಕನಕಮಜಲು ಗ್ರಾಮ ವ್ಯಾಪ್ತಿಯ ಸ.ನಂ. 97/1 ರಲ್ಲಿ ಡಿ.ಸಿ. ಮನ್ನಾ ಸ್ಥಳದಲ್ಲಿ 50 ಸೆಂಟ್ಸ್ ಜಾಗವನ್ನು ಮೊಗೇರ ಸಮುದಾಯ ಭವನಕ್ಕೆ ನೀಡಬೇಕೆಂದು ಮೊಗೇರ ಸಮುದಾಯದ ಪ್ರಮುಖರಾದ ಅಚ್ಚುತ ಮಲ್ಕಜೆ ಮುಂದಾಳತ್ವದಲ್ಲಿ ಕರುಣಾಕರ ಪಲ್ಲತಡ್ಕ, ಕೇಶವ ಮಾಸ್ಟರ್ ಹೊಸಗದ್ದೆ, ಬಾಬು ಕನಕಮಜಲು, ಸಚಿನ್ ಕನಕಮಜಲು, ಗಿರಿಯಪ್ಪ ಸುಣ್ಣಮೂಲೆಯವರು ತಾಲೂಕು ಕಚೇರಿ ಎದುರು ಧರಣಿ ನಡೆಸಿದರು.
ತಾಲೂಕು ಕಚೇರಿ ಎದುರು ಮೆಟ್ಟಿಲಿನಲ್ಲಿ ಕುಳಿತು, ಕನಕಮಜಲು ಗ್ರಾಮದ ಡಿ.ಸಿ. ಮನ್ನಾ ಜಮೀನಿನಲ್ಲಿ ನಮ್ಮ ಸಮುದಾಯದ ಮೊಗೇರ ಭವನ ಕಟ್ಟಡಕ್ಕೆ 50 ಸೆಂಟ್ಸ್ ಜಾಗ ಆರ್.ಟಿ.ಸಿ. ಆಗಿತ್ತು. ಆದರೆ ಅಲ್ಲಿ ಸಾಮಾಜಿಕ ಅರಣ್ಯದವರು ನೆಡು ತೋಪು ಮಾಡಿದ್ದು, ಈಗ ನಮಗೆ ಜಾಗ ನೀಡಲು ಆಕ್ಷೇಪ ಮಾಡುತಿದ್ದಾರೆ. ಆದ್ದರಿಂದ ಆ ಜಾಗ ಡಿ.ಸಿ. ಮನ್ನಾ ಆದ್ದರಿಂದ ಮೊಗೇರ ಭವನಕ್ಕೆ ಜಾಗ ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ತಹಶೀಲ್ದಾರ್ ಮಂಜುನಾಥರು ಧರಣಿ ನಿರತರಲ್ಲಿಗೆ ಬಂದು ಮಾತನಾಡಿದರು. ಈ ವೇಳೆ ಅಚ್ಚುತ ಮಲ್ಕಜೆಯವರು”ಡಿ.ಸಿ. ಮನ್ನಾ ಜಾಗದಲ್ಲಿ ಮೊಗೇರ ಭವನಕ್ಕೆ ಜಾಗ ನೀಡಬೇಕೆಂದು ನಾವು ಹಲವು ಬಾರಿ ಮನವಿ ಮಾಡಿದ್ದೇವೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭ ಮತದಾನ ಬಹಿಷ್ಕಾರ ಕ್ಕೆ ಈ ಭಾಗದವರು ಮುಂದಾದಾಗ ಅಧಿಕಾರಿಗಳು ಬಂದು ನಮಗೆ ಭರವಸೆ ನೀಡಿದ್ದಾರೆ. ಈಗ ನೀತಿ ಸಂಹಿತೆ ಮುಗಿದಿದ್ದು, ಕೊಟ್ಟ ಭರವಸೆ ಈಡೇರಿಸಬೇಕೆಂದು ಅಚ್ಚುತ ಮಲ್ಕಜೆ ಹೇಳಿದರು.
ತಹಶೀಲ್ದಾರ್ ಸಾಮಾಜಿಕ ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿ ತಾಲೂಕು ಕಚೇರಿಗೆ ಬರುವಂತೆ ಹೇಳಿದರು. ಅವರು ಬಂದ ಬಳಿಕ ಮೊಗೇರ ಮುಖಂಡರಿದ್ದು ಮಾತುಕತೆ ನಡೆಯಿತು. ನಮಗೆ ಮೊಗೇರ ಸಮುದಾಯದವರು ನೀಡಿರುವ ದಾಖಲೆಯನ್ನು ನಾವು ಮೇಲಧಿಕಾರಿಗಳಿಗೆ ಕಳುಹಿಸುತ್ತೇವೆ ಎಂದು ಸಾಮಾಜಿಕ ಅರಣ್ಯಾಧಿಕಾರಿಗಳು ಹೇಳಿದರು. ಸೋಮವಾರ ದಿನ ಮೊಗೇರ ಮುಖಂಡರು ಮಂಗಳೂರು ಸಾಮಾಜಿಕ ಅರಣ್ಯಾಧಿಕಾರಿ ಕಚೇರಿಗೆ ಹೋಗಿ ಅಧಿಕಾರಿಗಳೊಂದಿಗೆ ಮಾತನಾಡಿ, ಎನ್.ಒ.ಸಿ ಪಡೆಯುವಂತೆ ತಹಶೀಲ್ದಾರ್ ಸೂಚಿಸಿದರು. ಇದಕ್ಕೆ ಮುಖಂಡರು ಒಪ್ಪಿದರು.