ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದರೆ ನಿಮಗೆ ಗೊತ್ತಿದ್ದಿಲ್ಲದೇನೆ ಮನೆಗೆ ಬರುತ್ತೆ ನೋಟಿಸ್
ಸುಳ್ಯ ನಗರದ ಬೇರೆ ಬೇರೆ ಕಡೆಗಳಲ್ಲಿ ಸಂಜೆ ವೇಳೆ ಕೆಲವೊಂದು ಸಂದರ್ಭಗಳಲ್ಲಿ ಪೋಲಿಸ್ ಜೀಪು ನಿಂತು ಅದರ ಅಕ್ಕ ಪಕ್ಕದಲ್ಲಿ ನಿಂತಿರುವ ಪೊಲೀಸರಿಂದ ವಾಹನಗಳ ತಪಾಸಣಾ ಕಾರ್ಯ ನಡೆಯುತ್ತಿರುತ್ತದೆ.
ಈ ವೇಳೆಗೆ ಹೆಚ್ಚಾಗಿ ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಧರಿಸದೆ ಚಲಾಯಿಸುವುದು, ಕೆಲವು ಕಾರು ಚಾಲಕರು, ಸೀಟ್ ಬೆಲ್ಟ್ ಧರಿಸದೆ ಚಲಾಯಿಸುವುದು, ದಾಖಲೆ ಪತ್ರಗಳ ಕೊರತೆ ಇನ್ನಿತರ ವಿಷಯಗಳಲ್ಲಿ ದಂಡ ಕಟ್ಟಿ ಹೋಗುತ್ತಿದ್ದರು.
ಆದರೆ ಕೆಲವು ವಾಹನ ಚಾಲಕರು ಪೊಲೀಸ್ ವಾಹನ ತಪಾಸಣೆಗೆ ನಿಂತಿದೆ ಎಂದು ತಿಳಿದಾಗ ಬೇರೆ ಬೇರೆ ದಾರಿ ಮೂಲಕ ಎಸ್ಕೆಪ್ ಆಗುವಂತಹ ಪರಿಸ್ಥಿತಿ ಕೂಡ ನಡೆಯುತ್ತಿತ್ತು. ಇಲ್ಲದಿದ್ದಲ್ಲಿ ಪೊಲೀಸ್ ವಾಹನ ಅಲ್ಲಿಂದ ತೆರಳುವ ಸಮಯವನ್ನು ಕಾದು ಕುಳಿತದ್ದು ಇದೆ.
ಆದರೆ ಇದೀಗ ಆ ರೀತಿಯ ಪರಿಸ್ಥಿತಿಯಲ್ಲ.ಇದೀಗ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದ್ದಲ್ಲಿ ಅವರಿಗೆ ಅರಿವಿಲ್ಲದ ರೀತಿಯಲ್ಲಿಯೇ ದಂಡದ ನೋಟಿಸ್ ತಮ್ಮ ತಮ್ಮ ಮನೆಗಳಿಗೆ ಬರುವ ಹಾಗೆ ಸುಳ್ಯ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ಮಾಡುತ್ತಿದ್ದಾರೆ.
ನಗರದ ಕೆಲವೊಂದು ಕಡೆಗಳಲ್ಲಿ ಪೊಲೀಸರು ನಿಂತು ಮೊಬೈಲ್ ಫೋನ್ ಮೂಲಕ ವಾಹನಗಳ ಫೋಟೋವನ್ನು ಕ್ಲಿಕ್ಕಿಸಿ ಅದರ ನಂಬರ್ ಮೂಲಕ ವಾಹನದ ಮಾಲಕರನ್ನು ತಿಳಿದು ಅವರು ಕಟ್ಟಬೇಕಾದ ದಂಡದ ನೋಟಿಸ್ ಅಂಚೆ ಮೂಲಕ ಮನೆಗೆ ಕಳಿಸುವಂತದ್ದು,ಅಥವಾ ಠಾಣೆಯಿಂದ ದೂರವಾಣಿ ಮೂಲಕ ಅವರನ್ನು ಠಾಣೆಗೆ ಬರಮಾಡಿ ದಂಡ ಕಟ್ಟಿಸುವಂತದ್ದು ನಡೆಯುತ್ತಿದೆ.
ಈ ಬಗ್ಗೆ ಸುದ್ದಿ ವರದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಸುಳ್ಯ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ್ ಇದೀಗ ನಾವು ಮಾಡುತ್ತಿರುವ ಈ ಕಾರ್ಯಾಚರಣೆ ತುಂಬಾ ಯಶಸ್ವಿಯಾಗಿದ್ದು ಇದರಿಂದ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿ ಯಾರೇ ವಾಹನ ಚಲಾಯಿಸಿದರು ನೂರಕ್ಕೆ ನೂರು ದಂಡ ಕಟ್ಟಿಸುವ ಕೆಲಸ ನಡೆಯುತ್ತಿದೆ.
ಅಲ್ಲದೆ ಕಾನೂನು ಬಾಹಿರವಾದ ಯಾವುದಾದರೂ ಚಟುವಟಿಕೆಗಳಿಗೆ ವಾಹನಗಳನ್ನು ಬಳಸಿದ್ದಲ್ಲಿ ಅಂತಹ ವಾಹನಗಳ ನಂಬರ್ ಮತ್ತು ಚಲಾಯಿಸುವವರ ಫೋಟೋ ಸಮೇತ ಇಲಾಖೆಗೆ ದಾಖಲೆ ಮೂಲಕ ದೊರೆಯುತ್ತಿದ್ದು ಬೇರೆ ಬೇರೆ ಘಟನೆಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಲು ಕೂಡ ಸಾಧ್ಯವಾಗುತ್ತಿದೆ.ಆದ್ದರಿಂದ ಸಾರ್ವಜನಿಕರು ರಸ್ತೆಯಲ್ಲಿ ಪೊಲೀಸರು ಇಲ್ಲ ಎಂದು ಇಷ್ಟ ಬಂದ ರೀತಿಯಲ್ಲಿ ವಾಹನ ಚಲಾಯಿಸುವುದಾಗಲಿ, ನಿಯಮಗಳನ್ನು ಉಲ್ಲಂಘನೆ ಮಾಡುವುದಾಗಲಿ ಮಾಡಿದರೆ ಅವರವರ ಫೋಟೋ ಮತ್ತು ವಾಹನ ಸಂಖ್ಯೆ ಠಾಣೆಯಲ್ಲಿ ದಾಖಲಾಗುತ್ತಿದ್ದು ಆದ್ದರಿಂದ ಸಂಚಾರ ನಿಯಮವನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ.