ಜು.6ರಂದು ಟಿ.ಎಂ. ಶಹೀದ್ ತೆಕ್ಕಿಲ್ ರಿಗೆ ಸಾರ್ವಜನಿಕ ಸನ್ಮಾನ ಸಮಾರಂಭ

0

ವಿಧಾನಸಭಾಧ್ಯಕ್ಷರು, ಸಚಿವರು, ಶಾಸಕರು ಸಹಿತ ಗಣ್ಯರ ಆಗಮನ

ಅಭಿನಂದನಾ ಸಮಿತಿ ಅಧ್ಯಕ್ಷ ಸದಾನಂದ ‌ಮಾವಜಿ ಮಾಹಿತಿ

ರಾಜಕೀಯ, ಸಾಮಾಜಿಕ ಕ್ಷೇತ್ರದ ಮುಖಂಡ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭ ಜುಲೈ 6 ರಂದು ಪೂ.10.30ರಿಂದ ಕೇರ್ಪಳದ ಬಂಟರ ಭವನದಲ್ಲಿ ನಡೆಯಲಿದೆ ಎಂದು ಟಿ.ಎಂ.ಶಹೀದ್ ತೆಕ್ಕಿಲ್ ಅಭಿನಂದನಾ ಸಮಿತಿಯ ಅಧ್ಯಕ್ಷ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.

ಜೂ.29ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಾಮಾಜಿಕ, ಕೃಷಿ, ಧಾರ್ಮಿಕ, ಸಾಂಸ್ಕೃತಿಕ, ಸಹಕಾರ, ಶಿಕ್ಷಣ, ಉದ್ಯಮ ಮತ್ತು ರಾಜಕೀಯ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಮೂರೂವರೆ ದಶಕಗಳಿಂದ ಸೇವೆ ಸಲ್ಲಿಸಿ ಜನಾನುರಾಗಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಟಿ.ಎಂ.ಶಹೀದ್ ತೆಕ್ಕಿಲ್‌ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮೂಲಕ ಹಲವಾರು ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಎಲ್ಲರಿಗೂ ಪ್ರೇರಣೆಯಾಗಲಿ ಎಂಬ ದೃಷ್ಟಿಯಿಂದ ಮತ್ತು ಶಹೀದ್ ಅವರ ಸಮಾಜ ಸೇವೆಗೆ ಅಭಿನಂದನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜು.6ರಂದು ಪೂ.10.30ಕ್ಕೆ ಬಂಟರ ಭವನದಲ್ಲಿ ನಡೆಯುವ ಸಮಾರಂಭವನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಉದ್ಘಾಟಿಸುವರು. ಅಭಿನಂದನಾ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡುವರು. 55 ಸೇವಾ ಚಟುವಟಿಕೆಗಳಿಗೆ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹಮ್ಮದ್ ಚಾಲನೆ ನೀಡುವರು.55 ಸೇವಾ ಚಟುವಟಿಕೆಯ ಸವಲತ್ತು ವಿತರಣೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸುವರು.

ಅಭಿನಂದನಾ ಸಮಿತಿಯ ಅಧ್ಯಕ್ಷ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಟಿ.ಎಂ.ಶಹೀದ್ ತೆಕ್ಕಿಲ್ ಅವರನ್ನು ಸನ್ಮಾನಿಸುವರು. ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎಂ.ಬಿ.ಸದಾಶಿವ ಅಭಿನಂದನಾ ಭಾಷಣ ಮಾಡುವರು.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ,
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್ ಗೌಡ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಯೇನೆಪೋಯ ಡೀಮ್ಸ್ ಯೂನಿವರ್ಸಿಟಿಯ ಕುಲಪತಿ ಯೇನೆಪೋಯ ಅಬ್ದುಲ್ಲ ಕುಂಞಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ, ಸೂರಜ್ ಹೆಗ್ಡೆ, ಲೆಫ್ಟಿನೆಂಟ್ ಭವ್ಯ ನರಸಿಂಹಮೂರ್ತಿ, ನೆರ್ಲಿಗೆ ಪ್ರತಿಷ್ಠಾನದ ಸ್ಥಾಪಕರಾದ ಮಮತ ನೆರ್ಲಿಗೆ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಸೀತಾರಾಮ ರೈ ಸವಣೂರು, ಬೆಳ್ಳಾರೆ ಜ್ಞಾನ ಗಂಗಾ ವಿದ್ಯಾ ಸಂಸ್ಥೆಯ ಸಂಚಾಲಕರಾದ ಎಂ.ಪಿ.ಉಮೇಶ್,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನ.ಪಂ.ಮಾಜಿ ಅಧ್ಯಕ್ಷರಾದ ಎನ್.ಎ.ರಾಮಚಂದ್ರ, ಎಂ.ವೆಂಕಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜೆಡಿಎಸ್‌ ಅಧ್ಯಕ್ಷ ಸುಕುಮಾ‌ರ್ ಕೋಡ್ತುಗುಳಿ, ಅರಂತೋಡು ತೊಡಿಕಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ, ಹಿರಿಯ ಉದ್ಯಮಿ ಹಾಜಿ ಪಿ. ಇಸಾಕ್ ಸಾಹೇಬ್ ಪಾಜಪಳ್ಳ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸದಾನಂದ ಮಾವಜಿ ವಿವರಿಸಿದರು. ಸಭಾ ಕಾರ್ಯಕ್ರಮದ ಮುನ್ನ ಹಾಗೂ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ. ಸರ್ವರೂ ಈ ಕಾರ್ಯಕ್ರಮ ದಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.

ಅಭಿನಂದನಾ ಸಮಿತಿಯ ಸಂಚಾಲಕ ಕೆ.ಟಿ.ವಿಶ್ವನಾಥ್ ಮಾತನಾಡಿ ಎಸ್.ಎಂ. ಕೃಷ್ಣ ಸರಕಾರ ಇದ್ದಾಗ ಸಂದರ್ಭ ತಾಲೂಕಿನ 10 ಕಡೆಗಳಿಗೆ ಒಂದೊಂದು ಲಕ್ಷ ಅನುದಾನವನ್ನು ತರಿಸಿ ರಂಗಮಂದಿರಕ್ಕೆ ಕೊಡುಗೆ ನೀಡಿದ್ದಾರೆ. ಹೀಗೆ ಹಲವು ಜನಪರ ಕಾರ್ಯದಲ್ಲಿ ನಿರಂತರ ತೊಡಗಿಸಿಕೊಂಡವರು ಟಿ.ಎಂ.ಶಹೀದ್ ರವರು” ಎಂದು ಹೇಳಿದರು.

ಆಹಾರ ಸಮಿತಿ‌ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ಮಾತನಾಡಿ “ಟಿ.ಎಂ.ಶಹೀದ್ ಸ್ನೇಹ ಜೀವಿ.‌ ಯುವಜನ ಸಂಯುಕ್ತ ಮಂಡಳಿಯಂತ ಹಲವು ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಜನಪರ ಕೆಲಸ ಎಲ್ಲರಿಗೂ ಸ್ಪೂರ್ತಿ ಮತ್ತು ಮಾದರಿ. ಆದ್ದರಿಂದ ಅವರನ್ನು ನಾವೆಲ್ಲರೂ ಸೇರಿ ಸಾರ್ವಜನಿಕ ವಾಗಿ ಸ್ಮಾನಿಸುತ್ತಿದ್ದೇವೆ” ಎಂದು ಹೇಳಿದರು.

ರಾಜು ಪಂಡಿತ್, ಮೂಸಾ ಕುಂಚೆ ಪೈಂಬೆಚ್ಚಾಲ್, ಪರಶುರಾಮ ಚಿಲ್ತಡ್ಕ, ರಂಜಿತ್ ರೈ ಮೇನಾಲ, ಅಶ್ರಫ್ ಗುಂಡಿ, ಅಬ್ಬಾಸ್ ಅಡ್ಪಂಗಾಯ ಉಪಸ್ಥಿತರಿದ್ದರು.