ಸರಕಾರಿ ನೌಕರರು, ಜನಪ್ರತಿನಿಧಿಗಳು ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗೇ ಸೇರಿಸುವಂತೆ ಗ್ರಾಮಸಭೆ ನಿರ್ಣಯ ಮಾಡಿ

0

ಸರಕಾರಿ ಶಾಲೆ ಉಳಿಸಿ ಅಭಿಯಾನ ಗ್ರಾಮದಿಂದಲೇ ಆರಂಭವಾಗಲಿ : ಮಂಡೆಕೋಲು ಗ್ರಾಮ ಸಭೆ ಒತ್ತಾಯ

ಮಂಡೆಕೋಲು ಗ್ರಾಮ ವ್ಯಾಪ್ತಿಯ ಗ್ತಾಮ ಸಭೆಯು ಪೇರಾಲು ಶಾಲೆಯಲ್ಲಿ ಜು.16ರಂದು ನಡೆಯಿತು.
ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ. ನೋಡೆಲ್ ಅಧಿಕಾರಿಯಾಗಿದ್ದರು.

ಪಂಚಾಯತ್ ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ಅನಿಲ್ ತೋಟಪ್ಪಾಡಿ, ಪ್ರಶಾಂತಿ ಮಂಡೆಕೋಲುಬೈಲು, ರಾಧಿಕ ಮೈತ್ತಡ್ಕ, ವಿನುತಾ ಹರಿಶ್ಚಂದ್ರ ಪಾತಿಕಲ್ಲು, ಉಷಾ ಗಂಗಾಧರ್, ಗೀತಾ ಎಂ.ಎಸ್., ತಾರನಾಥ ಕೊಡೆಂಚಿಕಾರ್, ತಿಲಕ ಕುತ್ಯಾಡಿ, ಶಶಿಕಲಾ ಕುಂಟಿಕಾನ, ನಾರಾಯಣ ಕೆದ್ಕಾರ್, ದಿವ್ಯಲತಾ ಚೌಟಾಜೆ, ಪಿಡಿಒ ರಮೇಶ್ ಇದ್ದರು.

ಬಿ.ಇ.ಒ. ರಮೇಶ್ ರವರು ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಕುರಿತು ಪ್ರಸ್ತಾಪಿಸಿದಾಗ, ಶಾಲೆಯಿಂದ ಹೊರಗುಳಿದ ಮಕ್ಕಳು ಶಾಲೆಗೆ ಬರುವಂತೆ ಮಾಡಲು ಎಲ್ಲರೂ ಸಹಕಾರ ನೀಡುವಂತೆ ಕೇಳಿಕೊಂಡರು. ಈ ವೇಳೆ ಗ್ರಾಮಸ್ಥರಾದ ವೆಂಕಟ್ರಮಣ ಅತ್ಯಾಡಿಯವರು, ಸರಕಾರಿ ಶಾಲೆ ಉಳಿಸಬೇಕು. ಮಕ್ಕಳು ಶಾಲೆಗೆ ಬರಬೇಕೆಂದು ಭಾಷಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಳುತ್ತಾರೆ. ಇದನ್ನು ಕೇಳಲು ಚಂದಾ ಆಗ್ತದೆ. ಆದರೆ ಭಾಷಣ ಮಾಡುವ ಯಾರೂ ಕೂಡಾ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರಲ್ಲದೆ, ಮದುವೆ ಆಗಲು ಸರಕಾರಿ ಕೆಲಸದವರೇ ಆಗಬೇಕು. ಸರಕಾರಿ ಸೌಲಭ್ಯ ಎಲ್ಲವೂ ಬೇಕು. ಆದರೆ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವುದಿಲ್ಲ ಯಾಕೆ?. ಸರಕಾರಿ ಕೆಲಸ ಇರುವವರು ಮತ್ತು ಜನಪ್ರತಿನಿಧಿಗಳು ಅವರ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗೆ ಕಳುಹಿಸಬೇಕು ಎಂದು ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಿ. ನಮ್ಮ ಗ್ರಾಮದಿಂದಲೇ ಈ ಸರಕಾರಿ ಶಾಲೆ ಉಳಿಸಿ ಅಭಿಯಾನ ಆರಂಭಿಸೋಣ ಎಂದು ಒತ್ತಾಯಿಸಿದರು. ಸಭೆ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದರು.

ಮಂಡೆಕೋಲು ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿ ಸ್ಥಗಿತ, ಸರಕಾರಿ ಜಾಗ ಒತ್ತುವರಿ ಆದೇಶ, ಅಪಾಯಕಾರಿ ಮರ ತೆರವು, ರಸ್ತೆಯಲ್ಲಿ ನೀರು ನಿಂತು ಸಮಸ್ಯೆ ಸಹಿತ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತು.

ಬೆಳೆ ಸಾಲ ಪಡೆದವರು ಕಡ್ಡಾಯವಾಗಿ ಜು. 31ರೊಳಗೆ ವಿಮೆ ಪಾವತಿಸುವ ಕುರಿತು ಮಂಡೆಕೋಲು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಮಾಹಿತಿ ನೀಡಿದರು.