ಸುಳ್ಯದ ಪೈಚಾರು ಸಮೀಪ ಬೊಳುಬೈಲಿನಲ್ಲಿ ಮಳೆ ನೀರು ರಸ್ತೆಯಲ್ಲಿ ತುಂಬಿ ಹರಿಯುತ್ತಿರುವುದರಿಂದ ರಸ್ತೆ ನದಿಯಾಗಿ ಪರಿವರ್ತನೆಯಾಗಿದೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ಇದೇ ರೀತಿ ಮಳೆ ನೀರು ರಸ್ತೆಯಲ್ಲೆ ಹರಿಯುತ್ತಿತ್ತು. ಜೋರು ಮಳೆ ಬಂದಾಗ ಬೊಳುಬೈಲಲ್ಲಿ ರಸ್ತೆ ದಾಟಲು ಸಾಧ್ಯವಾಗುತ್ತಿರಲಿಲ್ಲ. ಚರಂಡಿ ಸರಿಯಾಗಿ ಇಲ್ಲದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ದೃಶ್ಯಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಇದು ವರದಿಯಾಗಿ ಇಲಾಖೆ ಕಣ್ಣು ತೆರೆದು ಚರಂಡಿ ಸರಿಪಡಿಸಿದ್ದರಿಂದ ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆ ಇರಲಿಲ್ಲ. ಆದರೆ ಅಂದು ನಿರ್ಮಿಸಿದ ಚರಂಡಿಯಲ್ಲಿ ಈಗ ಹೂಳು ತುಂಬಿ ಚರಂಡಿ ಬ್ಲಾಕ್ ಆಗಿದೆ. ಪರಿಣಾಮವಾಗಿ ದೊಡ್ಡ ಮಳೆ ಬಂದ ಕೂಡಲೇ ನೀರೆಲ್ಲ ಹೆದ್ದಾರಿಯಲ್ಲಿ ತುಂಬುತ್ತದೆ. ವಾಹನಗಳು ಬಹಳ ಕಷ್ಟಪಟ್ಟು ಸಾಗುವಂತಾಗಿದೆ.
ಈಗ ಪಿಡಬ್ಲ್ಯುಡಿ ಇಲಾಖೆ ಎಚ್ಚೆತ್ತು ಚರಂಡಿ ಸರಿಪಡಿಸಿದರೆ ಬೊಳುಬೈಲಲ್ಲಿ ರಾಜ್ಯಹೆದ್ದಾರಿಯಲ್ಲಿ ಮಳೆನೀರು ತುಂಬುವುದನ್ನು ತಪ್ಪಿಸಬಹುದಾಗಿದೆ.