ಚರಂಡಿ,ರಸ್ತೆ ಲೆಕ್ಕಿಸದೆ ಅಪಾಯಕಾರಿ ಸ್ಥಿತಿ ನಿರ್ಮಿಸುತ್ತಿರುವ ರಣ ನೀರು
ಸ್ಥಳೀಯರಲ್ಲಿ ಮತ್ತೆ ಮೂಡಿದ ಆತಂಕ
ಶಾಂತಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಸುಳ್ಯ ತಾಲೋಕು ಕ್ರೀಡಾಂಗಣ ಕಾಮಗಾರಿ ಜಾಗಕ್ಕೆ ಸ್ಥಳೀಯ ಪರಿಸರದ ಮಳೆ ನೀರು ಜಲಪಾತದಂತೆ ಧುಮುಕಿ ಬರುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಈ ಭಾಗದಲ್ಲಿ ಮಳೆ ನೀರು ರಸ್ತೆ, ಚರಂಡಿ ಯಾವುದನ್ನೂ ಲೆಕ್ಕಿಸದೆ ಕ್ರೀಡಾಂಗಣಕ್ಕೆ ಧುಮುಕುತ್ತಿದ್ದು ಈ ಬಂದ ನೀರು ಒಟ್ಟಾಗಿ ನದಿಯಂತೆ ತಗ್ಗು ಪ್ರದೇಶಕ್ಕೆ ಅಪಾಯಕಾರಿ ಸ್ಥಿತಿಯಲ್ಲಿ ಬರುತ್ತಿದೆ.ತಗ್ಗು ಪ್ರದೇಶದಲ್ಲಿ ಕೆಲವು ಮನೆಗಳು,ಮತ್ತು ಕೃಷಿ ತೋಟಗಳು ಇದ್ದು ಮೇಲಿನಿಂದ ಬರುತ್ತಿರುವ ನೀರಿನ ಪ್ರಮಾಣ ರಾತ್ರಿ ವೇಳೆಯಲ್ಲಿ ಏಕಾಏಕಿ ಹೆಚ್ಚಾದರೆ ಏನು ಮಾಡುವುದು ಎಂಬ ಆತಂಕ ಇದೀಗ ಸ್ಥಳೀಯರನ್ನು ಕಾಡ ತೊಡಗಿದೆ.
ಕ್ರೀಡಾಂಗಣದ ಸುತ್ತ ನೀರು ಹಾದು ಹೋಗುವ ಕಣಿಗಳನ್ನು ನಿರ್ಮಿಸಿದ್ದರೂ ಈ ಎಲ್ಲಾ ನೀರು ಬಂದು ಸೇರುವುದು ಮಾತ್ರ ಒಂದೇ ಕಡೆಯಾಗಿರುತ್ತದೆ.ಮೊದಲಿನಿಂದಲೂ ಈ ಘಟನೆಯ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು.ಆದ್ದರಿಂದ ಏನಾದರೂ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನವಹಿಸ ಬೇಕಾಗಿದೆ.