ಕನಕಮಜಲು: ರಾಷ್ಟ್ರೀಯ ಹೆದ್ದಾರಿಯ ಕಿರುಸೇತುವೆಯ ಅಡಿಭಾಗದಲ್ಲಿ ಮಣ್ಣು ಕುಸಿತ

0

ಅಪಾಯದಲ್ಲಿರುವ ಕಿರುಸೇತುವೆ ಕುಸಿತಗೊಳ್ಳುವ ಭೀತಿ

ಮಾಣಿ – ಮೈಸೂರು ರಾಷ್ಟ್ರೀಯ
ಹೆದ್ದಾರಿಯಲ್ಲಿ ಬರುವ ಕನಕಮಜಲಿನ ಕೆ.ಎಂ. ಜನರಲ್ ಸ್ಟೋರ್ ಬಳಿಯಿರುವ ಕಿರು ಸೇತುವೆಯ ಅಡಿಭಾಗದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಮಣ್ಣು ಕುಸಿತಗೊಂಡು, ಘನವಾಹನ ಸಂಚಾರಕ್ಕೆ ತೊಂದರೆಯಾಗುವ ಆತಂಕ ಎದುರಾಗಿದ್ದು, ಸೇತುವೆ ಕುಸಿಯುವ ಭೀತಿ ಎದುರಾಗಿದೆ‌.

ಕಿರುಸೇತುವೆಯ ಅಡಿಭಾಗದಲ್ಲಿ ನಾಲ್ಕೈದು ಅಡಿ ಉದ್ದಕ್ಕೆ ಮಣ್ಣು ಕುಸಿದಿದ್ದು, ಸುರಂಗ ನಿರ್ಮಾಣಗೊಂಡಂತೆ ಕಾಣುತ್ತಿದೆ. ಈ ಕಿರುಸೇತುವೆಯ ಅಡಿಭಾಗದಲ್ಲಿ ಹದಿನೈದು ಅಡಿ ಆಳದಲ್ಲಿ ತೋಡು ಹರಿಯುತ್ತಿದೆ.

ಜು‌.19ರಂದು ಕನಕಮಜಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಮತ್ತು ಪಂಚಾಯತಿ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ಸೇತುವೆ ಅಡಿಭಾಗದಲ್ಲಿ ಮಣ್ಣು ಕುಸಿತವಾಗಿರುವುದನ್ನು ಗಮನಿಸಿದ್ದು, ಪಿ.ಡಿ.ಒ. ಸರೋಜಿನಿ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಂಜಿನಿಯರ್ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಗುತ್ತಿಗೆದಾರರು ಜು.19ರಂದು ಮಧ್ಯಾಹ್ನ ಕನಕಮಜಲಿಗೆ ಬಂದು ಸೇತುವೆ ವೀಕ್ಷಣೆ ಮಾಡಿದ್ದು, ಗ್ರಾ.ಪಂ. ಸಹಕಾರದೊಂದಿಗೆ ಮುಂಜಾಗ್ರತಾ ಕ್ರಮವಾಗಿ ಕಿರುಸೇತುವೆಯ ಎರಡೂ ಭಾಗದಲ್ಲಿ ಬಿಳಿ ಪಟ್ಟಿ ಕಟ್ಟಿರುವುದಾಗಿ ತಿಳಿದುಬಂದಿದೆ.

ಸದ್ಯ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಇನ್ನಷ್ಟು ಮಳೆ ಸುರಿದರೆ ಸೇತುವೆ ಕುಸಿಯುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಸ್ಥಳೀಯರು. ಮಣ್ಣು ಕುಸಿದಿರುವ ಕಾರಣದಿಂದ ನೀರಿನ ಪೈಪುಗಳು ಸೇತುವೆ ಬದಿಯಲ್ಲಿ ಎದ್ದು ಕಾಣುತ್ತಿದ್ದು, ಗ್ರಾ.ಪಂ. ನೀರು ಸರಬರಾಜು ಪೈಪುಗಳಿಗೂ ಹಾನಿ ಸಂಭವಿಸುವ ಸಾಧ್ಯತೆಯಿದೆ.

ಇತ್ತೀಚಿನ ಕೆಲ ದಿನಗಳ ಹಿಂದೆ ಮಣ್ಣು ಕುಸಿದು ಸೇತುವೆ ಸಮೀಪದ ಚರಂಡಿ ಬ್ಲಾಕ್ ಆಗಿ ಮಳೆ ನೀರು ಸಮೀಪದ ಅಂಗಡಿ ಕಟ್ಟಡಕ್ಕೆ ಆವರಿಸಿದ್ದು, ಇದನ್ನು ಸ್ಥಳೀಯರು ಸೇರಿ ಸರಿಪಡಿಸಿರುವುದಾಗಿ ತಿಳಿದುಬಂದಿದೆ.
ಈ ಕಿರುಸೇತುವೆಯು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇರಿದ್ದು, ಹೆದ್ದಾರಿ ಇಲಾಖೆಯ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತರಾಗಿ ಸೇತುವೆ ಎರಡೂ ಬದಿ ಬ್ಯಾರಿಕೇಡ್ ಅಳವಡಿಸಿ, ಸೂಚನಾ ಫಲಕ ಇಟ್ಟು ಸೇತುವೆ ಬಳಿ ವಾಹನ ಸಂಚಾರ ನಿಧಾನವಾಗಿ ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕಾಗಿದೆ.

ಪ್ರಸ್ತುತ ಶಿರಾಡಿ ರಸ್ತೆಯೂ ಮಣ್ಣು ಕುಸಿತದಿಂದ ಬಂದ್ ಆಗಿದ್ದು, ಮಂಗಳೂರು ಭಾಗದಿಂದ ಬರುವ ಘನವಾಹನಗಳು ಈ ರಸ್ತೆಯಲ್ಲೇ ಸಾಗುತ್ತಿದ್ದು, ಕಿರು ಸೇತುವೆ ಮಾತ್ರ ಅಪಾಯದ ಸ್ಥಿತಿಯಲ್ಲಿದೆ.