ಸಂಜೆ 7 ಗಂಟೆಯಿಂದ ಪಾರ್ಕ್ ಗೆ ಬರುವಂತಿಲ್ಲ – ಪಾರ್ಟಿ, ಮೋಜುಗಳಿಗೂ ಅವಕಾಶವಿಲ್ಲ
ನಿಯಮ ತಪ್ಪಿದರೆ ದಂಡ : ನ.ಪಂ. ನಿಂದ ನಾಮಫಲಕ ಅಳವಡಿಕೆ
ಸುಳ್ಯದ ಕುರುಂಜಿಗುಡ್ಡೆ ಪಾರ್ಕ್ ಗೆ ಕೊನೆಗೂ ನಗರ ಪಂಚಾಯತ್ ನಿಯಮ ಬರೆದಿದ್ದು, ಜು.23ರಂದು ಸಂಜೆ ನಾಮಫಲಕ ಅಳವಡಿಸಿದೆ.
ಕುರುಂಜಿಗುಡ್ಡೆ ಉದ್ಯಾನವನಕ್ಕೆ ಬೆಳಗ್ಗೆ 8 ಗಂಟೆ ಮೊದಲು ಬರುವಂತಿಲ್ಲ. ಸಂಜೆ 7 ಗಂಟೆಯ ನಂತರ ಕೂಡಾ ಪಾರ್ಕ್ ನಲ್ಲಿ ಇರುವಂತಿಲ್ಲ. ಪಾರ್ಟಿ, ಮೋಜುಗಳನ್ನು ಮಾಡಬಾರದು. ನಿಯಮ ತಪ್ಪಿದ್ದಲ್ಲಿ ದಂಡ ವಿಧಿಸುವ ಕುರಿತು ನ.ಪಂ. ಪ್ರಕಟಣೆ ಹೊರಡಿಸಿ ನಾಮಫಲಕ ಅಳವಡಿಸಿದೆ.
12 ಲಕ್ಷ ರೂ ಖರ್ಚು ಮಾಡಿ ಕುರುಂಜಿಗುಡ್ಡೆ ಪಾರ್ಕ್ ಮಾಡಲಾಗಿತ್ತು. ಇತ್ತೀಚಿನ ದಿನಗಳಿಂದ ನಗರ ಪಂಚಾಯತ್ ಅದರ ನಿರ್ವಹಣೆ ಮರೆತುದರಿಂದ ಪಾರ್ಕ್ ಸೊರಗಿ ಹೋಗಿತ್ತು. ಪೊದೆಗಳು ಕಾಡಿನಂತಾಗಿದೆ ಮದ್ಯದ ಬಾಟಲಿ ಅಲ್ಲಲ್ಲಿ ಬಿದ್ದಿದೆ.ಸ್ವಚ್ಚತೆಯೇ ಮರೆಯಾಗಿತ್ತು. ರಾತ್ರಿ ಪಾರ್ಟಿ, ಜನ ಸಂಚಾರವೂ ಇತ್ತು. ಈ ಕುರಿತು ಮಾಧ್ಯಮ ಗಳು ನಿರಂತರ ವರದಿ ಪ್ರಕಟಿಸಿದರೂ ನಗರ ಪಂಚಾಯತ್ ಮಾತ್ರ ಸುಮ್ಮನಿತ್ತು.
ಜು.23 ರಂದು ಸುದ್ದಿ ವೆಬ್ ಸೈಟ್ ನಲ್ಲಿ “ಕುರುಂಜಿಗುಡ್ಡೆ ಪಾರ್ಕ್ : ಮನವಿ ನೀಡಿ, ಮಾಧ್ಯಮಗಳು ವರದಿ ಪ್ರಕಟಿಸಿ 20 ದಿನ ಕಳೆದರೂ ಸಂಬಂಧವೇ ಇಲ್ಲವೆಂಬಂತೆ ಇರುವ ನ.ಪಂ.” ಎಂಬ ಶೀರ್ಷಿಕೆಯಡಿಯಲ್ಲಿ ವಿಸ್ತೃತ ವರದಿ ಪ್ರಕಟಿಸಿತು. ವರದಿ ಪ್ರಕಟವಾಗುತ್ತಿರುವಂತೆ ಒಂದು ಗಂಟೆಯೊಳಗೆ ನಗರ ಪಂಚಾಯತ್ ನಿಯಮ ರೂಪಿಸಿ ನಾಮಫಲಕ ಅಳವಡಿಸಿದೆ.
ನಗರ ಪಂಚಾಯತ್ ಪಾರ್ಕ್ ಕುರಿತು ಇದೀಗ ಗಮನಹರಿಸಿದಂತಾಗಿದ್ದು, ಅದರ ನಿರ್ವಹಣೆ ಕುರಿತು ನಿಯಮವನ್ನು ರೂಪಿಸಬೇಕಾಗಿದೆ.