ಸ್ಮೋಕ್ ಹೌಸ್ ಬೆಂಕಿಗಾಹುತಿಯಾಗಿದ್ದರೂ ತನಿಖೆ ನಡೆಸದ ಪೋಲೀಸ್ ಇಲಾಖೆ

0

ಪಂಬೆತ್ತಾಡಿ ಗ್ರಾಮದ ಕರಿಕ್ಕಳದಲ್ಲಿರುವ ಕೃಷಿಕೆ ಶ್ರೀಮತಿ ಯಶೋದಮ್ಮ ರವರ ರಬ್ಬರ್ ಸ್ಮೋಕ್ ಹೌಸ್ ಇತ್ತೀಚೆಗೆ ಬೆಂಕಿಗಾಹುತಿಯಾಗಿದ್ದು ಈ ಕೃತ್ಯ ನಡೆಸಿದವರಾರೆಂಬ ರಹಸ್ಯ ಪತ್ತೆ ಮಾಡಬೇಕೆಂದು ಯಶೋದಮ್ಮ ಪೋಲೀಸ್ ಇಲಾಖೆಗೆ ದೂರು ನೀಡಿದ್ದರೂ, ಪೋಲೀಸರು ಆಸಕ್ತಿ ವಹಿಸಿಲ್ಲವೆನ್ನಲಾದ ಘಟನೆ ವರದಿಯಾಗಿದೆ. ಇದರಿಂದ ಬೇಸತ್ತಿರುವ ಯಶೋದಮ್ಮರವರು ಎಸ್.ಪಿ.ಯವರಿಗೆ ಫೋನ್ ಮಾಡಿ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.
ಕರಿಕ್ಕಳ ಯಶೋದಮ್ಮರವರ ಮನೆಯ ಸಮೀಪವಿರುವ ರಬ್ಬರ್ ಸ್ಮೋಕ್ ಹೌಸ್‌ಗೆ ಜು.೪ ರಂದು ಬೆಂಕಿ ಹಿಡಿದು ಸುಟ್ಟು ಹೋಗಿದ್ದು ಸುಮಾರು ೮ ಲಕ್ಷ ರೂ. ನಷ್ಟ ಸಂಭವಿಸಿತ್ತೆನ್ನಲಾಗಿದೆ. ಯಶೋದಮ್ಮರವರು ರಬ್ಬರ್ ಮರಗಳ ಟ್ಯಾಪಿಂಗನ್ನು ಲೀಸ್‌ಗೆ ನೀಡಿದ್ದು, ಲೀಸ್‌ಗೆ ಪಡೆದ ವ್ಯಕ್ತಿ ಕೆಮಿಕಲ್‌ಗಳನ್ನು ಬಳಸಿ ಅಧಿಕ ರಬ್ಬರ್ ಹಾಲು ಬರುವಂತೆ ಮಾಡುತ್ತಿದ್ದಾರೆಂಬ ಅನುಮಾನ ಬಂದ ಮೇರೆಗೆ ಯಶೋದಮ್ಮ ರವರು ಟ್ಯಾಪಿಂಗ್ ನಿಲ್ಲಿಸುವಂತೆ ಅವರಿಗೆ ಹೇಳಿದ್ದರೆನ್ನಲಾಗಿದೆ. ಹಾಗಿದ್ದರೆ ಎಗ್ರಿಮೆಂಟ್ ಪ್ರಕಾರ ನಾನು ಕೊಟ್ಟ ಹಣ ವಾಪಸ್ ಕೊಡಿ'' ಎಂದು ರಬ್ಬರ್ ಲೀಸಿಗೆ ಪಡೆದವರು ಕೇಳಿದ್ದರೆನ್ನಲಾಗಿದೆ. ಇದಾದ ಕೆಲದಿನಗಳಲ್ಲೆ ಸ್ಮೋಕ್ ಹೌಸ್‌ಗೆ ಬೆಂಕಿ ಬಿದ್ದು ಉರಿದುದರಿಂದ ಲೀಸ್‌ಗೆ ಪಡೆದಿದ್ದವರ ಕೈವಾಡವಿರಬಹುದೇ ಎಂಬ ಅನುಮಾನ ಬಂದ ಮೇರೆಗೆ ಯಶೋದಮ್ಮರವರು ಪೋಲೀಸ್ ದೂರು ಬರೆದು ಮೊಮ್ಮಗನೊಂದಿಗೆ ಕಳುಹಿಸಿಕೊಟ್ಟರು. ಆದರೆ ಪೋಲೀಸರು ಅದನ್ನು ಸ್ವೀಕರಿಸಲಿಲ್ಲವೆನ್ನಲಾಗಿದೆ.ಸ್ಮೋಕ್ ಹೌಸ್‌ಗೆ ನಾನು ಬೆಂಕಿ ಕೊಟ್ಟಿದ್ದೆಂದು ನನ್ನ ಮೇಲೆ ಸುಳ್ಳು ಪ್ರಚಾರವನ್ನು ಯಶೋದಮ್ಮರವರು ಮಾಡುತ್ತಿದ್ದಾರೆ ಎಂದು ರಬ್ಬರ್ ಲೀಸ್‌ಗೆ ಪಡೆದಿದ್ದವರು ದೂರು ನೀಡಿದ್ದಾರೆ. ನಾವು ತನಿಖೆಗೆ ಬರುತ್ತೇವೆ” ಎಂದು ಪೋಲೀಸರು ತಿಳಿಸಿದರೆನ್ನಲಾಗಿದೆ.
ಮರುದಿನ ಪೋಲೀಸರು ಬಂದು, ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿಕೊಳ್ಳಿ. ಲೀಸ್‌ಗೆ ರಬ್ಬರ್ ತೋಟ ಪಡೆದವನಿಗೆ ನೀವು ಕೊಡಬೇಕಾಗಿರುವುದನ್ನು ಕೊಟ್ಟು ಕಳಿಸಿ ಬಿಡಿ'' ಎಂದು ಹೇಳಿದರೆಂದು ಯಶೋದಮ್ಮ ತಿಳಿಸಿದ್ದಾರೆ.ಸ್ಮೋಕ್ ಹೌಸ್‌ಗೆ ಬೆಂಕಿ ಕೊಟ್ಟವರಾರೆಂದು ನಮ್ಮಲ್ಲಿರುವ ಸಿ.ಸಿ. ಕ್ಯಾಮರಾ ಫೋಟೇಜ್‌ಗಳನ್ನು ಪರಿಶೀಲಿಸಿ ನೀವು ಪತ್ತೆ ಹಚ್ಚಿರಿ. ನಂತರ ನಾನು ಅವನಿಗೆ ದುಡ್ಡು ಕೊಡುತ್ತೇನೆ” ಎಂದು ನಾನು ಹೇಳಿರುವುದಾಗಿ ಯಶೋದಮ್ಮ ಹೇಳಿದ್ದಾರೆ.

ತಾನು ಲಿಖಿತ ದೂರು ಕೊಟ್ಟಿರುವುದನ್ನು ಸ್ವೀಕರಿಸದೆ, ಕೃತ್ಯ ಹೇಗೆ ನಡೆಯಿತೆಂದು ತನಿಖೆಯನ್ನು ಮಾಡದೆ ಸುಬ್ರಹ್ಮಣ್ಯ ಪೋಲೀಸರು ಹೀಗೇಕೆ ಮಾಡುತ್ತಿದ್ದಾರೆಂದು ತಿಳಿಯುತ್ತಿಲ್ಲ. ನಾನು ಎಸ್..ಪಿ.ಗೆ ತಿಳಿಸಿದ ಮೇರೆಗೆ ಡಿವೈಎಸ್‌ಪಿ ಬಂದು ಮಾತಾಡಿ ಹೋಗಿದ್ದಾರೆ. ಇದುವರೆಗೆ ಕ್ರಮ ಕೈಗೊಂಡಿಲ್ಲ. ನಾಳೆ ನನ್ನ ಮನೆಗೆ ಯಾರಾದರೂ ಬೆಂಕಿ ಕೊಟ್ಟು ಹೋದರೂ ಇದೇ ಗತಿಯೇ?” ಎಂದು ಯಶೋದಮ್ಮ ಪ್ರಶ್ನಿಸಿದ್ದಾರೆ.

ಎಸ್.ಐ. ಪ್ರತಿಕ್ರಿಯೆ

ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯ ಎಸ್.ಐ. ಕಾರ್ತಿಕ್‌ರನ್ನು ಸಂಪರ್ಕಿಸಿ ವಿಚಾರಿಸಿದಾಗ, “ಅದು ಸಿವಿಲ್ ಮ್ಯಾಟರ್. ಲೀಸ್ ಅಗ್ರಿಮೆಂಟ್ ವಿಚಾರವಾಗಿ ಅವರ ಮಧ್ಯೆ ವಿವಾದ ಉದ್ಭವಿಸಿದೆ. ನಾನು ಲೀಸಲ್ಲಿ ಪಡೆದ ರಬ್ಬರ್ ಹಾಳೆ ಮತ್ತು ಸ್ಕ್ರಾಪ್ ಸ್ಮೋಕ್ ಹೌಸಲ್ಲಿದ್ದು ನನ್ನನ್ನು ಇಲ್ಲಿಂದ ಓಡಿಸುವ ಉದ್ದೇಶದಿಂದ ಬೆಂಕಿ ಕೊಡಿಸುವ ಕೆಲಸ ಮಾಡಿ, ಈಗ ನನ್ನ ಮೇಲೆಯೇ ಅಪವಾದ ಹಾಕುತ್ತಿದ್ದಾರೆಂದು ಆ ಲೀಸಿಗೆ ಪಡೆದ ವ್ಯಕ್ತಿ ಅದೇ ದಿನ ದೂರು ಕೊಟ್ಟಿದ್ದ. ಆದರೆ ನಾವು, ಮನೆಯಲ್ಲಿ ಒಬ್ಬಂಟಿಯಾಗಿರುವ ಹಿರಿಯ ವಯಸ್ಸಿನ ಮಹಿಳೆ ಎಂಬ ಕಾರಣಕ್ಕೆ ಅವರ ಮೇಲೆ ಕೇಸು ದಾಖಲಿಸಿಕೊಳ್ಳದೆ ವಿವಾದ ಮುಗಿಸಿಕೊಳ್ಳಲು ಹೇಳಿದ್ದೆವು. ಅವರ ಮಕ್ಕಳು ಕೂಡಾ ಅದನ್ನೇ ಹೇಳಿದ್ದರು. ಇವರು ಮೊದಲು ಒಪ್ಪಿ ನಂತರ ಒಪ್ಪುತ್ತಿಲ್ಲ. ಸಿ.ಸಿ. ಕ್ಯಾಮರಾ ಫೂಟೇಜ್ ನಾವು ನೋಡಿದ್ದೇವೆ. ಅದರಲ್ಲಿ ಯಾರು ಬೆಂಕಿ ಕೊಟ್ಟದ್ದೆಂದು ಕಾಣುವುದಿಲ್ಲ. ಸಾಕ್ಷ್ಯಾಧಾರ ಇಲ್ಲದೆ ಕೆಲಸ ಮಾಡುತ್ತಿದ್ದವರೆಲ್ಲರ ಮೇಲೆ ಕೇಸು ದಾಖಲಿಸಲೂ ಆಗುವುದಿಲ್ಲ. ಎಸ್.ಪಿ. ಯವರು ಮಂಗಳೂರಿನಿಂದ ಡಿವೈಎಸ್ ಪಿಯವರನ್ನು ಕಳಿಸಿದ್ದಾರೆ. ಅವರೂ ಪರಿಶೀಲಿಸಿದ್ದಾರೆ” ಎಂದು ಹೇಳಿದರು.