ತಾಲೂಕು ಮಟ್ಟದ ವಿಶ್ವ ಸ್ಥನ್ಯಪಾನ ಸಪ್ತಾಹ ಉದ್ಘಾಟನೆ ಮಾಹಿತಿ ಕಾರ್ಯಕ್ರಮ

0

ಕೊರತೆಗಳನ್ನು ಕೊನೆಗೊಳಿಸಿ ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ ಎಂಬ ಘೋಷ ವಾಕ್ಯದೊಂದಿಗೆ ಸ್ತನ್ಯ ಪಾನ ಅಭ್ಯಾಸಗಳ ಸುಧಾರಣೆಗಾಗಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಚಟುವಟಿಕೆಗಳಿಗೆ ಆದ್ಯತೆ ನೀಡಲು ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಸುಳ್ಯ ತಾಲ್ಲೂಕು ಆಸ್ಪತ್ರೆಯಲ್ಲಿ ಆಚರಿಸಲಾಯಿತು.

ತಾಲೂಕು ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ರಜನಿ ತಾಯಂದಿರನ್ನು ಉದ್ದೇಶಿಸಿ ಎದೆಹಾಲಿನ ಮಹತ್ವದ ಕುರಿತು ಅರಿವು ಮೂಡಿಸಿದರು.


ಆರು ತಿಂಗಳವರೆಗೆ ಮಗುವಿಗೆ ಕೇವಲ ಎದೆಹಾಲನ್ನು ಮಾತ್ರ ನೀಡಲು, ಎದೆಹಾಲಿನ ಸಂಪೂರ್ಣ ಲಾಭಗಳನ್ನು ಪಡೆಯಲು, ಮಗುವು ಸಂಪೂರ್ಣ ವಿಕಾಸ ಹೊಂದಲು, ಮಗುವನ್ನು ನ್ಯೂಮೋನಿಯಾ,ಅತಿಸಾರಭೇದಿ, ಅಪೌಷ್ಟಿಕತೆ ಇವುಗಳಿಂದ ತಡೆಗಟ್ಟಲು ಸ್ತನ್ಯಪಾನವು ಅತ್ಯಂತ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ ಎಂದು ಮಾಹಿತಿ ನೀಡಿದರು. ಆರಂಭಿಕ ಬಾಲ್ಯದ ಬೆಳವಣಿಗೆ ಹೆಚ್ಚಿಸಲು ಮತ್ತು ಪೌಷ್ಟಿಕಾಂಶವನ್ನು ಸುಧಾರಿಸಲು ಹಾಗೂ ಶಿಶುಮರಣ ಪ್ರಮಾಣವನ್ನು ಕಡಿಮೆ ಮಾಡಲು ಸ್ತ ನ್ಯಪಾನ ಅತ್ಯಮೂಲ್ಯ ಪಾತ್ರವನ್ನು ನಿರ್ವಹಿಸುತ್ತದೆ ಎಂದರು. ತಾಯಂದಿರು, ಪೋಷಕರು, ಇಲಾಖಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಹಿರಿಯ ಶುಶ್ರೂಷಣ ಆಧಿಕಾರಿ ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಹೊನ್ನಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಟಿ, ಆಶಾ ಮೇಲ್ವಿಚಾರಕಿ ಧನ್ಯಶ್ರೀ ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಟಿ ಸ್ವಾಗತಿಸಿ, ಆಶಾ ಮೇಲ್ವಿಚಾರಕಿ ಧನ್ಯಶ್ರೀ ವಂದಿಸಿದರು.