ಮೊಗರ್ಪಣೆ ಧರ್ಮ ಗುರುಗಳ ತಂದೆಯ ಮೇಲೆ ಕಾಡಾನೆ ದಾಳಿ

0

ಕೈ ಮತ್ತು ಕಾಲಿಗೆ ಗಾಯ, ಪ್ರಾಣಾಪಾಯದಿಂದ ಪಾರು

ಮೊಗರ್ಪಣೆ ಮಸೀದಿಯ ಧರ್ಮ ಗುರುಗಳಾದ ಸೌಕತ್ ಅಲಿ ಸಖಾಫಿ ರವರ ತಂದೆ ಹುಸೈನ್ ರವರ ಮೇಲೆ ಕೊಡಗು ಸುಂಟಿಕೊಪ್ಪ ಸಮೀಪ ಅ.3 ರಂದು ಮುಂಜಾನೆ ಕಾಡಾನೆ ದಾಳಿ ನಡೆಸಿದ್ದು, ಘಟನೆಯಿಂದ ಅವರ ಕೈ ಮತ್ತು ಕಾಲುಗಳಿಗೆ ಗಾಯ ವಾಗಿ ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ.

ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ‌ ಅಂದಗೋವೆ ಪೈಸಾರಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ನೀರು ಗಂಟಿ (ವಾಟರ್‌ ಮ್ಯಾನ್) ಕೆಲಸ ನಿರ್ವಹಿಸುತ್ತಿರುವ ಇವರು ಮುಂಜಾನೆ ಬೆಳಗ್ಗೆ 6ಗಂಟೆ ಸಮಯದಲ್ಲಿ ನೀರಿನ ಮೋಟಾರ್ ಆನ್ ಮಾಡಲೆಂದು ಪಕ್ಕದ ಫಾರೆಸ್ಟ್ ಬಳಿ ಇರುವ ಮೋಟಾರ್ ರೂಮ್ ಬಳಿ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಏಕಾಏಕಿ ದಾಳಿ ಮಾಡಿದ ಆನೆ ಇವರನ್ನು ಸೊಂಡಿಲಿನಲ್ಲಿ ದೂಡಿ ಹಾಕಿದ್ದು ಇವರು ನೆಲಕ್ಕೆ ಬಿದ್ದಾಗ ಆನೆಯು ಅದರ ದಂತದಿಂದ ಇವರನ್ನು ತಿವಿಯಲು ಮುಂದಾಗಿದ್ದು ಕೂಡಲೇ ಅದರಿಂದ ತಪ್ಪಿಸಿದ ಅವರು ಪಕ್ಕದಲ್ಲಿದ್ದ ಮೋರಿಯ ಒಳಗೆ ನುಗ್ಗಿದ್ದಾರೆ.

ಈ ವೇಳೆ ಕೋಪ ಗೊಂಡಿದ್ದ ಆನೆ ಅಲ್ಪ ಸಮಯ ಮೋರಿಯನ್ನು ತನ್ನ ಕೊಂಬಿನಲ್ಲಿ ಚುಚ್ಚಿ ಹೊಡೆಯಲು ಪ್ರಯತ್ನಿಸಿದ್ದು ಬಳಿಕ ಅಲ್ಲಿಂದ ತೆರಳಿದೆ.

ಕಾಡಾನೆ ದಾಳಿಯಿಂದ ಹುಸೈನ್ ರವರ ಕೈ ಹಾಗೂ ಕಾಲಿನ ಭಾಗಗಳಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇವರನ್ನು ಧಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.