ಡಾ. ಕುರುಂಜಿ ವೆಂಕಟ್ರಮಣ ಗೌಡರ 11 ನೇ ಪುಣ್ಯತಿಥಿ

0

ಕೆ.ವಿ.ಜಿ. ಯವರ ಪುತ್ಥಳಿಗೆ ಗಣ್ಯರಿಂದ ಪುಷ್ಪನಮನ

ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಉದ್ಯೋಗಿಗಳು ನೀಡುವ ಉತ್ತಮ ಸೇವೆಯಿಂದ ಸಂಸ್ಥೆ ಬೆಳೆದು ಬಂದಿದೆ : ಡಾ. ಕೆ.ವಿ. ಚಿದಾನಂದ

” ಕೆ.ವಿ.ಜಿ. ವಿದ್ಯಾ ಸಂಸ್ಥೆಗಳಲ್ಲಿ ಸುಮಾರು 1800 ಉದ್ಯೋಗಿಗಳು ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವುದರಿಂದ ಸಂಸ್ಥೆ ಉತ್ತಮ ರೀತಿಯಲ್ಲಿ ಬೆಳೆದು ಬಂದಿದೆ. ಕೊರೊನಾ ಸಂದರ್ಭದಲ್ಲಿ ಮಂಗಳೂರು ಬಿಟ್ಟರೆ ನಮ್ಮ ಮೆಡಿಕಲ್ ಕಾಲೇಜಿನಲ್ಲೇ ಕೊರೊನಾ ಟೆಸ್ಟ್ ವ್ಯವಸ್ಥೆ ಇದ್ದದ್ದು. ದಿವಸಕ್ಕೆ ಮೂರು ಸಾವಿರ ಪರೀಕ್ಷೆಗಳು ನಡೆಯುತ್ತಿದ್ದವು. ಇದಕ್ಕೆಲ್ಲಾ ನಮ್ಮ ಪೂಜ್ಯರು ಈ ವಿದ್ಯಾಸಂಸ್ಥೆಯನ್ಬು ಸ್ಥಾಪಿಸಿ ಬೆಳೆಸಿದ್ದೇ ಕಾರಣ” ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದರು ಹೇಳಿದರು. ಅವರು ದಿ.ಡಾ.ಕುರುಂಜಿಯವರ ಸಂಸ್ಮರಣಾ ದಿನವಾದ ಆ. 7 ರಂದು ಕೆ.ವಿ.ಜಿ ಕ್ಯಾಂಪಸ್ ನಲ್ಲಿರುವ ಡಾ. ಕೆ.ವಿ.ಜಿ.ಯವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕೆ.ವಿ.ಜಿ. ಸ್ಥಾಪಕರ ದಿನಾಚರಣಾ ಸಮಿತಿಯ ಆಶ್ರಯದಲ್ಲಿ ಕೆ.ವಿ.ಜಿ. ಕ್ಯಾಂಪಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ ಜಿ. ಮಾತನಾಡಿ ” ಸುಳ್ಯದಂತ ಗ್ರಾಮೀಣ ಪ್ರದೇಶ ಬೆಳೆಯುವುದಕ್ಕೆ ಡಾ. ಕುರುಂಜಿಯವರು ಕಾರಣ. ಜಾತಿ ಧರ್ಮ ಬೇಧವಿಲ್ಲದೆ ಲಕ್ಷಾಂತರ ಮಂದಿಗೆ ಶಿಕ್ಷಣ ದೊರೆಯುವಂತೆ ಮಾಡಿದ ಡಾ. ಕುರುಂಜಿಯವರ ಸಾಧನೆ ಅಮೂಲ್ಯವಾದುದು” ಎಂದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ಮಾತನಾಡಿ ” ನಮಗೆ ರಾಜಕಾರಣಿಗಳು ಏನೂ ಕೊಡುಗೆ ಕೊಟ್ಟಿಲ್ಲ. ಸುಳ್ಯಕ್ಕೆ ಅಮೂಲ್ಯವಾದ ಕೊಡುಗೆ ಕೊಟ್ಟವರು ಡಾ. ಕುರುಂಜಿಯವರು. ದಯವಿಟ್ಟು ಯಾರೂ ಕೂಡ ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಬಗ್ಗೆ ನೆಗೆಟಿವ್ ಮಾತನಾಡಬಾರದು. ಪಾಸಿಟಿವ್ ಮಾತನಾಡಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು” ಎಂದರು.


ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಸ್ಥಾಪಕಾಧ್ಯಕ್ಷ ನ್ಯಾಯವಾದಿ ಎನ್. ಜಯಪ್ರಕಾಶ್ ರೈ ಮಾತನಾಡಿ ” ಕುರುಂಜಿಯವರ ಸಾಧನೆಗಳು ನಮ್ಮ ಕಣ್ಣ ಮುಂದೆಯೇ ಇದೆ. ಅವರ ಆದರ್ಶಗಳನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಕ್ಯಾಂಪಸ್ ನಲ್ಲಿ ಕೆ.ವಿ.ಜಿ. ಯವರ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸದಿದ್ದುದರಿಂದ ಸಾರ್ವಜನಿಕರಿಗೆ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ರಚನೆಯಾಗಿದೆ” ಎಂದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಕಾರ್ಯದರ್ಶಿ ಕೆ.ವಿ.ಹೇಮನಾಥ್, ಕೌನ್ಸಿಲ್ ಸದಸ್ಯರಾದ ಜಗದೀಶ್ ಅಡ್ತಲೆ, ಧನಂಜಯ ಮದುವೆಗದ್ದೆ, ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್, ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಡಾ. ಎನ್.ಎ. ಜ್ಞಾನೇಶ್, ಅಕಾಡೆಮಿಕ್ ಅಡ್ವೆಸರ್ ಗಳಾದ ಪ್ರೊ.ಬಾಲಚಂದ್ರ ಗೌಡ, ದಾಮೋದರ ಗೌಡ ಕೆ.ವಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ ಸೇರಿದಂತೆ ಸುಳ್ಯದ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕೆ.ವಿ.ಜಿ.ಯವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.
ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ, ಸ್ಥಾಪಕರ ದಿನಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಲೀಲಾಧರ್ ಡಿ.ವಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎನ್.ಎಂ.ಸಿ. ಪ್ರಾಂಶುಪಾಲರಾದ ರುದ್ರಕುಮಾರ್ ವಂದಿಸಿದರು.