ಆ.15 ರಂದು ಅಪರಾಹ್ನ ಸುಳ್ಯ ನಗರದಲ್ಲಿ ಸ್ವಾತಂತ್ರ್ಯ ನಡಿಗೆ ಏರ್ಪಡಿಸಲು ನಿರ್ಧಾರ

0

ಮೂರು ಕಡೆಯಿಂದ ಏಕಕಾಲದಲ್ಲಿ ಹೊರಟು ಬಸ್ ನಿಲ್ದಾಣದಲ್ಲಿ ಸಂಗಮ

ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಆಗಸ್ಟ್ ೧೫ರಂದು ಅಪರಾಹ್ನ ಸುಳ್ಯ ನಗರದಲ್ಲಿ ಸುಳ್ಯ ನಗರದ ಮತ್ತು ತಾಲೂಕಿನ ಎಲ್ಲ ಸಂಘ ಸಂಸ್ಥೆಗಳ ಸಹಭಾಗಿತ್ವ ದೊಂದಿಗೆ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.


ಆ.೭ ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಗಾಂಧಿ ಚಿಂತನ ವೇದಿಕೆ ಸುಳ್ಯ, ಯುವಜನ ಸಂಯುಕ್ತ ಮಂಡಳಿ ಹಾಗೂ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಸಂಘ ಸಂಸ್ಥೆಗಳ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ, ಸುದ್ದಿ ಬಿಡುಗಡೆಯ ಸಂಪಾದಕ ಹರೀಶ್ ಬಂಟ್ವಾಳರವರು ಗಾಂಧಿ ಜಯಂತಿಯಂದು ಗಾಂಧಿ ನಡಿಗೆ ಏರ್ಪಡಿಸುತ್ತಿರುವ ಗಾಂಧಿ ಚಿಂತನ ವೇದಿಕೆಯು ಕಳೆದ ನಾಲ್ಕು ವರ್ಷಗಳಿಂದ ಜಟ್ಟಿಪಳ್ಳದಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವನ್ನು ಏರ್ಪಡಿಸಿಕೊಂಡು ಬರುತ್ತಿದೆ. ಅದನ್ನು ಈ ಬಾರಿ ಆಗಸ್ಟ್ ೧೫ರಂದು ಸುಳ್ಯ ನಗರದ ಎಲ್ಲ ವಾರ್ಡ್ ಗಳ ಜನರನ್ನು ಸೇರಿಸಿಕೊಂಡು ಮಾಡಬೇಕೆಂಬ ಆಲೋಚನೆ ಇದೆ ಎಂದರು. ಈ ಬಗ್ಗೆ ಚರ್ಚೆ ನಡೆದು ಆ . ೧೫ರಂದು ಬೆಳಿಗ್ಗೆ ಎಲ್ಲ ಕಡೆ ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮಗಳು ಇರುವುದರಿಂದ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮವನ್ನು ಮಧ್ಯಾಹ್ನ ನಂತರ ಮಾಡುವುದೊಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಯಿತು.


ಪೈಚಾರ್ ಕಡೆಯಿಂದಾಗಿ ಬರುವವರು,ಶಾಂತಿನಗರ, ಬೆಟ್ಟಂಪಾಡಿ,ಜಯನಗರ,ಹಳೇಗೇಟಿನವರು ಹಾಗೂ ಬೀರಮಂಗಿಲದವರು ಮಧ್ಯಾಹ್ನ ೩ ಗಂಟೆಗೆ ಜ್ಯೋತಿ ಸರ್ಕಲ್‌ಗೆ ಬರಬೇಕು. ಪರಿವಾರಕಾನ ಕಡೆಯಿಂದ ಬರುವವರು ಕಾಯರ್ತೋಡಿ,ಕಲ್ಲುಮುಟ್ಟು ವಾರ್ಡಿನವರು ಮಧ್ಯಾಹ್ನ ವಿಷ್ಣು ಸರ್ಕಲ್ ಗೆ ಬರಬೇಕು. ವಿವೇಕಾನಂದ ಸರ್ಕಲ್ ಕಡೆಯಿಂದ ಬರುವವರು ಕೇರ್ಪಳ, ಕುರುಂಜಿಭಾಗ್, ಬೂಡು, ಚೆನ್ನಕೇಶವ ದೇವಸ್ಥಾನದ ಸುತ್ತಮುತ್ತಲಿನವರು ಚೆನ್ನಕೇಶವ ದೇವಸ್ಥಾನದ ಮುಂಭಾಗ ಮಧ್ಯಾಹ್ನ ೩ ಗಂಟೆಗೆ ಸೇರಬೇಕು. ೩.೧೫ ಕ್ಕೆ ಸರಿಯಾಗಿ ಏಕಕಾಲದಲ್ಲಿ ವಿಷ್ಣು ಸರ್ಕಲ್, ಜ್ಯೋತಿ ಸರ್ಕಲ್ ಮತ್ತು ಚೆನ್ನಕೇಶವ ದೇವಸ್ಥಾನದ ಬಳಿಯಿಂದ ‘ಸ್ವಾತಂತ್ರ್ಯ ನಡಿಗೆ’ ಹೊರಟು ಬಸ್ ನಿಲ್ದಾಣದಲ್ಲಿ ಸೇರುವುದೆಂದೂ, ಅಲ್ಲಿ ಸ್ವಾತಂತ್ರ್ಯ ಗೀತೆ ಹಾಡಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ಸಂಕಲ್ಪ ಕೈಗೊಳ್ಳುವುದೆಂದು ನಿರ್ಧರಿಸಲಾಯಿತು.


ಸುಳ್ಯ ನಗರದ ಎಲ್ಲ ವಾರ್ಡ್ ಗಳಲ್ಲಿಯೂ ಅಲ್ಲಲ್ಲಿಯ ಎಲ್ಲ ಸಂಘ ಸಂಸ್ಥೆಗಳವರು ಪರಸ್ಪರ ಸೇರಿ ಚರ್ಚಿಸಿ ಒಂದೊಂದು ವಾರ್ಡಿಂದ ಕನಿಷ್ಠ ನೂರು ಜನ ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸುವಂತೆ ಜನರನ್ನು ಪ್ರೇರೇಪಿಸಬೇಕೆಂದು ನಿರ್ಧರಿಸಲಾಯಿತು.
ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿ ಚಿಂತನ ವೇದಿಕೆಯ ಸಂಚಾಲಕಲ್ಲೊಬ್ಬರಾದ ದಿನೇಶ್ ಮಡಪ್ಪಾಡಿಯವರು,ಸುಳ್ಯ ಯಾವತ್ತು ಹೊಸ ಹೊಸ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ ಪ್ರದೇಶ. ೧೮೩೭ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದಲ್ಲಿಂದ ಇದುವರೆಗೆ ಸುಳ್ಯದವರು ಸಾಹಸ ಪ್ರವೃತ್ತಿ ತೋರುವ ಇತಿಹಾಸವೇ ಇದೆ. ಇವತ್ತು ಸುದ್ದಿಯವರು ಸ್ವಾತಂತ್ರ್ಯ ನಡಿಗೆಯ ಪರಿಕಲ್ಪನೆ ನಮ್ಮ ಮುಂದಿರಿಸಿದ್ದಾರೆ. ಸುಳ್ಯ ನಗರದಲ್ಲಿ ಈ ಬಾರಿ ಅದನ್ನು ಮಾಡುವ ಬಗ್ಗೆ ಹರೀಶ್ ಬಂಟ್ವಾಳ್‌ರು ನಮ್ಮನ್ನೆಲ್ಲ ಸೇರಿಸಿದ್ದಾರೆ. ಇದು ದೇಶ ಪ್ರೇಮದ ಅಭಿವ್ಯಕ್ತಿಗೂ ವೇದಿಕೆಯಾಗುತ್ತದೆ. ಎಲ್ಲರೂ ಒಟ್ಟಾಗಿ ಸಾಮರಸ್ಯದಿಂದ ಬದುಕಿದರೆ ದೇಶದ ಅಭಿವೃದ್ಧಿಯಾಗುತ್ತದೆಂಬ ಆಶಯವೂ ವ್ಯಕ್ತವಾಗುತ್ತದೆ.ಇಂತಹ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತಾಗಬೇಕು ಎಂದರು.
ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪ್ರವೀಣ್ ಜಯನಗರ, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ,ಶಾರದಾಂಬ ಸೇವಾ ಸಮಿತಿಯ ರಾಜು ಪಂಡಿತ್, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಖಜಾಂಚಿ ಶ್ರೀಮತಿ ಚಂದ್ರಾಕ್ಷಿ ಜೆ.ರೈ , ಕೆಥೋಲಿಕ್ ಯುವ ಸಂಚಲನದ ಸಂಚಾಲಕಿ ಜೂಲಿಯಾ ಕ್ರಾಸ್ತ , ಹಳೆಗೇಟು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶ್ರೀನಿವಾಸ್ ರಾವ್, ಗೌಡರ ಯುವ ಸೇವಾ ಸಂಘದ ನಗರ ಘಟಕದ ಅಧ್ಯಕ್ಷ ರಾಕೇಶ್ ಕುಂಟಿಕಾನ , ಮಾಜಿ ತಾ.ಪಂ. ಸದಸ್ಯ ರಾಧಾಕೃಷ್ಣ ಬೊಳ್ಳೂರು ಚರ್ಚೆಯಲ್ಲಿ ಪಾಲ್ಗೊಂಡರು.
ಮಾಜಿ ನ.ಪಂ. ಸದಸ್ಯ ನಜೀರ್ ಶಾಂತಿನಗರ,ಬೆನಕ ಸಂಘಟನೆಯ ಮುರಳಿ ಮಾವಂಜಿ,ನಂದರಾಜ ಸಂಕೇಶ, ಗುರುಸ್ವಾಮಿ, ನ.ಪಂ. ಸದಸ್ಯ ಶರೀಫ್ ಕಂಠಿ, ಸಿದ್ದಿಕ್ ಕಟ್ಟೆಕಾರ್, ಪದ್ಮನಾಭ ಹರ್ಲಡ್ಕ, ಎ. ಕೆ. ಹಿಮಕರ,ಯಶ್ವಿತ್ ಕಾಳಮ್ಮನೆ, ಕು/ಅಶ್ವಿತಾ ಪಿ.ಜೆ. ಭಾಗವಹಿಸಿದ್ದರು.