ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಘಟನೆ
ದೂರು ಕೊಟ್ಟ ಸೇವಾರ್ಥಿ, ಕರ್ತೃವಿನ ತಾತ್ಕಾಲಿಕ ಅಮಾನತು
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸರ್ಪಸಂಸ್ಕಾರದ ಕ್ರಿಯಾಕರ್ತರು ಸೇವಾರ್ಥಿಗಳಿಂದ ಹೆಚ್ಚಿನ ದಕ್ಷಿಣೆಗಾಗಿ ಪೀಡಿಸಿ, ಕೆಲಸದಿಂದ ತಾತ್ಕಾಲಿಕ ಅಮಾನತುಗೊಳಿಸಿದ ಘಟನೆ ವರದಿಯಾಗಿದೆ.
ಆಂದ್ರ ಮೂಲದ ಸೇವಾರ್ಥಿಗಳು ಸರ್ಪ ಸಂಸ್ಕಾರ ಸೇವೆಗಾಗಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ಸರ್ಪ ಸಂಸ್ಕಾರ ಸೇವೆ ಮಾಡಿಸಿದ್ದರು. ಸೇವೆ ಮುಗಿಸಿ ಎರಡನೇ ದಿನ ಸೇವಾರ್ಥಿಗಳು ಅರ್ಚಕರಿಗೆ ದಕ್ಷಿಣೆ ನೀಡಿದ್ದಾರೆ. ಈ ವೇಳೆ ಕಡಿಮೆ ದಕ್ಷಿಣೆ ಕೊಟ್ಟರೆಂಬ ಕಾರಣಕ್ಕಾಗಿ ಕ್ರಿಯಾಕರ್ತರ ದಕ್ಷಿಣೆ ನೀಡಿದ ತಟ್ಟೆಯನ್ನು ದೂರ ತಳ್ಳಿದರೆನ್ನಲಾಗಿದೆ. ಇದರಿಂದ ಬೇಸರಗೊಂಡ ಸೇವಾರ್ಥಿಗಳು ದೇವಸ್ಥಾನದ ಅಧಿಕಾರಿಗಳಿಗೆ ದೂರು ನೀಡಿದ್ದಾಗಿ ತಿಳಿದು ಬಂದಿದೆ.
ಆದ್ದರಿಂದ ಸರ್ಪ ಸಂಸ್ಕಾರ ಕ್ರಿಯಾಕರ್ತ ಶಿವಪ್ರಕಾಶ್ ಪಾಂಡೇಲು ಎಂಬವರು ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯಕ್ಕೆ ಬರದಂತೆ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಆದೇಶಸಿರುವುದಾಗಿ ತಿಳಿದು ಬಂದಿದೆ. ಸರ್ಪ ಸಂಸ್ಕಾರ ಕ್ರಿಯಾ ಕರ್ತರು ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿದ್ದರೂ ದೇವಸ್ಥಾನದ ವತಿಯಿಂದ ಅವರಿಗೆ ಸಂಬಳ ಪಾವತಿಸಲಾಗುತ್ತಿದೆ. ದಕ್ಷಿಣೆ ರೂಪದಲ್ಲಿ ಹಣ ಸೇವಾರ್ಥಿಗಳು ನೀಡುತ್ತಾರಾದರೂ ಇಂತಿಷ್ಟೇ ಹಣ ನೀಡಬೇಕು, ಪ್ರತ್ಯೇಕ ತಾಂಬೂಲ ಕಾಣಿಕೆ ನೀಡಬೇಕು ಎಂಬ ಹೊಸ ಬೇಡಿಕೆಗಳು ಅರ್ಚಕರಿಂದ ಬರುತ್ತಿರುವುದು ಕಂಡು ಕ್ರಮ ಕೈಗೊಳ್ಳಬೇಕಾಗಿದೆ.