ವಿ.ಹೆಚ್.ಪಿ , ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಪ್ರಖಂಡದ ಆಯೋಜನೆ
ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃ ಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ ಹಾಗೂ ಸುಳ್ಯ ನಗರ ಇದರ ಸಂಯೋಜನೆಯಲ್ಲಿ ಶಾಸ್ತ್ರೀ ವೃತ್ತದಿಂದ ಚೆನ್ನಕೇಶವ ದೇವಸ್ಥಾನದ ತನಕ ಬೃಹತ್ ಪಂಜಿನ ಮೆರವಣಿಗೆಯು ಆ.14 ರಂದು ನಡೆಯಿತು.
ಸಂಜೆ ಶಾಸ್ತ್ರಿ ವೃತ್ತದ ಬಳಿಯಿಂದ ಹೊರಟ ಮೆರವಣಿಗೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಚಾಲನೆ ನೀಡಿದರು.
ಕೈಯಲ್ಲಿ ಪಂಜು ಹಿಡಿದ ಯುವಕ ಯುವತಿಯರು ಹಾಗೂ ಮಹಿಳೆಯರು ಪುರುಷರು ಸುಳ್ಯದ ಪ್ರಮುಖ ರಸ್ತೆಯಲ್ಲಿ ಗಾಂಧಿನಗರದ ತನಕ ಸಾಗಿ ಹಿಂತಿರುಗಿ ರಥಬೀದಿಯಾಗಿ ಚೆನ್ನಕೇಶವ ದೇವಸ್ಥಾನದ ತನಕ ಸಾಗಿ ಬಂದರು.
ಬಳಿಕ ದೇವಸ್ಥಾನದ ರಾಜಗೋಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಸಮಾರಂಭವು ನಡೆಯಿತು.
ಆರಂಭದಲ್ಲಿ ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ ನಿವೃತ್ತ ಯೋಧ ದೀಪ ಪ್ರಜ್ವಲಿಸಿದರು.
ಸುಳ್ಯ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸೋಮಶೇಖರ ಪೈಕ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ನಿವೃತ್ತ ಯೋಧ ಬಾಲಕೃಷ್ಣ ಎನ್.ಬಿ ಯವರು ಮಾತನಾಡಿ” ಅಖಂಡ ಭಾರತ ನಿರ್ಮಾಣದ ಸಂಕಲ್ಪವು ತಾಲೂಕಿಗೆ ಸೀಮಿತವಾಗಬಾರದು ಪ್ರಪಂಚಾದ್ಯಂತ ಪಸರಿಸಬೇಕು. ನಮ್ಮ ಕರ್ಮದಲ್ಲಿ ಒಳ್ಳೆಯ ಧ್ಯೇಯವಿರಬೇಕು. ಯುವ ಪೀಳಿಗೆ ದೇಶ ರಕ್ಷಣೆಯ ಹೊಣೆ ಹೊರುವ ಮಹತ್ಕಾರ್ಯದ ಸೇನೆಯ ನ್ನು ಬಲ ಪಡಿಸಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಮಂಗಳೂರು ಪ್ರಾಂತ ಜಿಲ್ಲಾ ಸಂಚಾಲಕ ಪ್ರದೀಪ್ ಸರಿಪಳ್ಳ ಮಾತನಾಡಿ ” ಭಾರತ ದೇಶವು ಯಾವತ್ತೂ ಗುಲಾಮಗಿರಿ ಮಾಡಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರಕಬೇಕಾದರೆ ಹಲವು ಮಂದಿ ಕ್ರಾಂತಿಕಾರಿ ವೀರ ಪುರುಷರು ಹೋರಾಡಿದ್ದಾರೆ. ಪಠ್ಯ ಪುಸ್ತಕ ದಲ್ಲಿ ಗಾಂಧಿ ಪರಿವಾರದ ಹೆಸರು ಮಾತ್ರ ಉಲ್ಲೇಖಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ರಕ್ತ ಕ್ರಾಂತಿಯಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ.ವಿಶ್ವದಲ್ಲೇ ಭಾರತ ಜ್ಞಾನಿಗಳ ದೇಶವಾಗಿ ಹೊರ ಹೊಮ್ಮಿದೆ. ಜ್ಞಾನಿಯಾಗಿ ಬದುಕು ನಡೆಸುವ ವ್ಯಕ್ತಿ ಭಾರತದ ಪ್ರಜೆ ಯಾಗಿರುತ್ತಾನೆ. ಸ್ವಾತಂತ್ರ್ಯ ಸಿಗುವಲ್ಲಿ ಈ ಮಣ್ಣಿನಲ್ಲಿ ಹುಟ್ಟಿ ಬೆಳೆದ ವೀರ ಕೆದಂಬಾಡಿ ರಾಮಯ್ಯ ಗೌಡರ ನೆಲದಲ್ಲಿ ಜನಿಸಿರುವ ನಾವುಗಳು ದೇಶ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ವೀರ ಸಾವರ್ಕರ್ ರವರ ಜೀವನ ಚರಿತ್ರೆಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ನಮ್ಮಿಂದಾಗಬೇಕು. ಇಂದು ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ ನಮ್ಮ ದೇಶಕ್ಕೆ ಕಾಲಿಡದಂತೆ ಜಾಗೃತರಾಗುವಂತೆ ಪಣ ತೊಡಬೇಕು. ಅಂದು ಮಾಡಿದ ಸಂಕಲ್ಪದಿಂದ ರಾಮ ಮಂದಿರ ನಿರ್ಮಾಣವಾಗಿದೆ. ಕಳೆದ ಕೆಲ ವರ್ಷಗಳಿಂದ ತ್ರಿಖಂಡ ಭಾರತವನ್ನು ಅಖಂಡ ಮಾಡುವ ಸಲುವಾಗಿ ಸಂಕಲ್ಪ ಮಾಡುತ್ತಿದ್ದೇವೆ. ಮುಂದೊಂದು ದಿನ ನಮ್ಮ ಭಾರತ ಮಾತೆಯ ಉಳಿದ ಭಾಗಗಳು ನಮ್ಮ ಕೈ ಸೇರಲಿದೆ ಎಂಬ ದೃಢತೆ ಹೊಂದಿರಬೇಕು ಎಂದು
ಅವರು ಸಭೆಯನ್ನು ಉದ್ದೇಶಿಸಿದಿಕ್ಸೂಚಿ ಭಾಷಣ ಮಾಡಿದರು.
ವೇದಿಕೆಯಲ್ಲಿ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ವಿ.ಹೆಚ್.ಪಿ ನಗರ ಸಂಚಾಲಕ ಉಪೇಂದ್ರ ನಾಯಕ್, ರೂಪೇಶ್ ಪೂಜಾರಿ ಮನೆ, ಹರಿಪ್ರಸಾದ್ ಎಲಿಮಲೆ ಉಪಸ್ಥಿತರಿದ್ದರು.
ಶ್ರೀಮತಿ ಪುಷ್ಪಾ ಮೇದಪ್ಪ ವಂದೇ ಮಾತರಂ ಗೀತೆ ಹಾಡಿದರು. ರೂಪೇಶ್ ಪೂಜಾರಿಮನೆ ವೈಯುಕ್ತಿಕ ಗೀತೆ ಪ್ರಸ್ತುತ ಪಡಿಸಿದರು. ನವೀನ್ ಎಲಿಮಲೆ ಅಖಂಡ ಭಾರತದ ಸಂಕಲ್ಪ ವಿಧಿಯನ್ನು ನೆರವೇರಿಸಿದರು. ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿ, ವರ್ಷಿತ್ ಚೊಕ್ಕಾಡಿ ವಂದಿಸಿದರು. ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು.