ಶಾಸಕರಿಂದ ನೂತನ ಪ್ರಹ್ಲಾದ ಸಭಾ ಮಂಟಪದ ಉದ್ಘಾಟನೆ- ಧಾರ್ಮಿಕ ಸಭೆ
ಸುಳ್ಯದಜೀವನದಿಯಾಗಿರುವ ಪಯಸ್ವಿನಿ ನದಿಯ ತಟದಲ್ಲಿರಾರಾಜಿಸುತ್ತಿರುವ ಶ್ರೀ ಗುರು ರಾಯರ ಮಠವು ಸ್ಥಾಪನೆಯಾಗಿ ಈ ಪರಿಸರದಲ್ಲಿ ಧಾರ್ಮಿಕತೆಯ ಆಚರಣೆಗಳಿಗೆ ಬಹಳಷ್ಟು ಮಹತ್ವ ಬಂದಿದೆ. ಮಂತ್ರಾಲಯ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗದ ಭಕ್ತಾದಿಗಳು ಸುಳ್ಯದಲ್ಲಿರುವ ಈ ಮಠಕ್ಕೆ ಬಂದು ರಾಯರ ದರ್ಶನ ಪಡೆದು ಪುನೀತರಾಗಲು ಸಾಧ್ಯವಾಗಿದೆ ಎಂದು ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಹೇಳಿದರು.
ಅವರು
ಶ್ರೀ ಗುರು ರಾಘವೇಂದ್ರ ಮಠದ 353ನೇ ವರ್ಷದ ರಾಯರ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಹ್ಲಾದ ಮಂಟಪದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮರ್ಯಾದ ಪುರುಷೋತ್ತಮ
ಶ್ರೀ ರಾಮನ ನಾಮ
ಸ್ಮರಣೆಯಿಂದ ನಮ್ಮೆಲ್ಲರ ಜೀವನವು ಪಾವನವಾಗವುದು.
ಕಳೆದ 8 ವರ್ಷಗಳಿಂದ ರಾಘವೇಂದ್ರ ಮಠದಲ್ಲಿ ನಡೆಯುತ್ತಿರುವ ರಾಯರ ಮಹೋತ್ಸವವು ಹಿಂದು ಧರ್ಮದ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳನ್ನು ಬಲಪಡಿಸಲು ಪ್ರೇರಣೆಯಾಗಿದೆ. ಜ್ಯೋತಿಷ್ಯ ಶಾಸ್ತ್ರ ಬೋಧಿಸುವ ಸಂದರ್ಭದಲ್ಲಿ ನಮ್ಮ ಹಿಂದೂ ಧರ್ಮದ ಆಚಾರ ವಿಚಾರಗಳ ಬಗ್ಗೆ ಅವರ ಬಳಿ ಬರುವ ಭಕ್ತಾದಿಗಳಿಗೆ ತಿಳಿಸಿಕೊಡುವ ಮೂಲಕ ಧರ್ಮ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಬ್ರಹ್ಮಶ್ರೀ ವೇದಮೂರ್ತಿ ಜ್ಯೋತಿಷ್ಯ ವಿಶ್ವ ಮೂರ್ತಿ ಬಡಕಿಲ್ಲಾಯ ರವರು ಮಾತನಾಡಿ “ರಾಯರು ನಂಬಿದ ಭಕ್ತರಿಗೆ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಘವೇಂದ್ರ ಸ್ವಾಮಿಗಳು ತತ್ವಜ್ಞಾನಿಗಳು.
ಭಕ್ತರ ಮನಸ್ಸಿನ ಅಂತರಾತ್ಮವನ್ನರಿತು ಸಿದ್ಧಿಯನ್ನು ಕರುಣಿಸುತ್ತಾರೆ. ಕಷ್ಟಗಳನ್ನು ದೂರಮಾಡುವ ಕಾರುಣ್ಯ ವಾರಿಧಿ, ಕಾಮಧೇನು.
ಶ್ರೀ ಗುರುರಾಯರು ರಾಯರ ಪವಾಡಗಳು ಇವತ್ತಿಗೂಗೋಚರಿಸುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಉದ್ಯಮಿ ಜಿ.ಎಲ್ ಆಚಾರ್ಯ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯರವರು ಮಾತನಾಡಿ” ಸುಳ್ಯದ ರಾಯರ ಮಠಕ್ಕೆ ಪ್ರತಿ ವರ್ಷ ಉತ್ಸವದ ಸಮಯದಲ್ಲಿ ಭೇಟಿ ನೀಡಿ ರಾಯರ ದರ್ಶನ ಮಾಡಿದ್ದೇನೆ. ವರ್ಷದಿಂದ ವರ್ಷಕ್ಕೆ ಪ್ರಗತಿ ಕಂಡಿರುವುದು ಸಾನಿಧ್ಯದ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಟ್ರಸ್ಟಿನ ಒಬ್ಬ ಸದಸ್ಯನಾಗಿಯೂ ಸೇವೆ ಮಾಡುವ ಅವಕಾಶ ನನಗೆ ದೊರಕಿದೆ. ಸಂಘಟನೆಯ ಶಕ್ತಿ ಸಾಮಾಜಿಕ ಆಯಾಮಗಳಿಗೆ ಧಾರ್ಮಿಕ ಆಚರಣೆಗಳಿಗೆ ಪೂರಕವಾಗಿದೆ ಎಂದು ಅವರು ಉಲ್ಲೇಖಿಸಿದರು.
ಬೃಂದಾವನ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಂ. ಎನ್
ಶ್ರೀಕೃಷ್ಣ ಸೋಮಯಾಗಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ” ರಾಯರ ಭಕ್ತರ ಸಹಕಾರದಿಂದ ಪ್ರತಿವರ್ಷ ಈ ಸಾನಿಧ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. 353ರ ರಾಯರ ಆರಾಧನೆ ಮಹೋತ್ಸವ ಸಂದರ್ಭದಲ್ಲಿ ಮಂತ್ರಾಲಯದಲ್ಲಿ
ಚಿನ್ನದ ಪಲ್ಲಕ್ಕಿ ಸಮರ್ಪಣೆಯಾಗಿದೆ. ಸುಳ್ಯ ಮಠದಲ್ಲಿ
ಪ್ರಹ್ಲಾದ ಮಂಟಪವನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಹೇಳಿದರು.
ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ. ಎನ್. ಎ. ಜ್ಞಾನೇಶ್, ಸಾಹಿತಿಗಳು ಕೃಷಿಕರಾದ ಪ್ರಭಾಕರ ಕಲ್ಲುರಾಯ ಬೆಳ್ಳೂರು, ಸಾಹಿತಿ ಸುಮಾ ಸುಬ್ಬರಾವ್ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬೃಂದಾವನ ಸೇವಾ ಟ್ರಸ್ಟಿ ಪ್ರವೀಣ್ ರಾವ್ ವಂದಿಸಿದರು.
ಶ್ರೀ ಗುರು ರಾಘವೇಂದ್ರ ಮಠದಲ್ಲಿ ರಾಯರ 353ನೇ ವರ್ಷದ ಅಂಗವಾಗಿ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಹರಿ ಎಳಚಿತ್ತಾಯ ರವರ ನೇತೃತ್ವದಲ್ಲಿ ಪ್ರಾತ:ಕಾಲದಲ್ಲಿ ಗಣಪತಿ ಹವನ, ಪವಮಾನ ಹೋಮ, ಪವಮಾನ ಅಭಿಷೇಕ, ಬ್ರಾಹ್ಮಣರಾಧನೆಯಾಗಿ ಮಧ್ಯಾಹ್ನ ಮಹಾಪೂಜೆ ನಡೆದು ಮಂತ್ರಾಕ್ಷತೆಯೊಂದಿಗೆ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆಯಾಯಿತು. ಆಲೆಟ್ಟಿ ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆಯು ನಡೆಯಿತು.
ಸಂಜೆ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ ಇವರಿಂದ ಭಜನಾ ಕಾರ್ಯಕ್ರಮ, ತದನಂತರ ಗುರುರಾಯರ ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ, ಅಷ್ಟವಧಾನ ಸೇವೆಯಾಗಿ ರಾತ್ರಿ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಈ ಸಂದರ್ಭದಲ್ಲಿ ಮಠದ ಬೃಂದಾವನ ಸೇವಾ ಟ್ರಸ್ಟ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಮಠದ ಅಧ್ಯಕ್ಷರು ಮತ್ತು ಸದಸ್ಯರು ಸರ್ವರನ್ನು ಸ್ವಾಗತಿಸಿದರು.
ಸ್ಥಳೀಯ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.