ಸೆ.2ರಂದು ಸುಳ್ಯದ ಎನ್ನೆಂಸಿಯಲ್ಲಿ `ಅಮರ ಸುಳ್ಯ ಸಂಗ್ರಾಮ 1837′ ರಾಷ್ಟ್ರೀಯ ವಿಚಾರ ಸಂಕಿರಣ

0

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಸಂಘ, ಇತಿಹಾಸ ವಿಭಾಗ ಐಕ್ಯೂಎಸಿ ಆಶ್ರಯದಲ್ಲಿ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರ ಮನೆ ಮನೆಗೆ ಕನ್ನಡ ಪುಸ್ತಕ ಅಭಿಯಾನದಡಿಯಲ್ಲಿ ಬಂಟಮಲೆ ಅಕಾಡೆಮಿ ಸಹಭಾಗಿತ್ವದಲ್ಲಿ ಅಮರ ಸುಳ್ಯ ಸಂಗ್ರಾಮ 1837 (ಡಾ.ವಿಜಯ್ ಪೂಣಚ್ಚ ತಂಬಂಡ ಅವರ ಕೃತಿ ಆಧಾರಿತ ವಿಚಾರ ಸಂಕಿರಣ) ಇದರ ರಾಷ್ಟ್ರೀಯ ವಿಚಾರ ಸಂಕಿರಣ 2024 ಕಾರ್ಯಕ್ರಮ ಸೆ.2ರಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಎನ್.ಎಂ.ಸಿ. ಪ್ರಾಂಶುಪಾಲ ಡಾ| ರುದ್ರಕುಮಾರ್ ಎಂ.ಎಂ. ಹೇಳಿದರು.


ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬೆಳಗ್ಗೆ ಗಂಟೆ 10ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಹಂಪಿ ಕನ್ನಡ ವಿವಿ ಕುಲಪತಿ ಡಾ| ಡಿ.ವಿ. ಪರಮಶಿವಮೂರ್ತಿ ಉದ್ಘಾಟನೆ ನೆರವೇರಿಸಲಿದ್ದಾರೆ. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸುವರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸೇರಿದಂತೆ ಗಣ್ಯರು ಅತಿಥಿಗಳಾಗಿರುವರು.


ಮಧ್ಯಾಹ್ನ ಗಂಟೆ 12ರಿಂದ ಪ್ರಬಂಧ ಮಂಡನೆ ನಡೆಯಲಿದೆ. ಎಂಟು ಶತಮಾನಗಳ ಕಾಲ ಕೊಡಗನ್ನು ಆಳಿದ ಚಂಗಾಳ್ವರು ಮತ್ತು ಕೊಂಗಾಳ್ವರು – ಲಿಂಗಾಯರ ಅರಸರ ಆರಂಭಿಕ ಕಾಲಘಟ್ಟ ವಿಷದಲ್ಲಿ ಚಿತ್ರದುರ್ಗಾ ವಾಣಿವಿಲಾಸಪುರ ಸ.ಪ.ಪೂ.ಕಾಲೇಜಿನ ಅತಿಥಿ ಉಪನ್ಯಾಸಕ ಡಾ.ಜಗದೀಶ್ ಜಿ.ವಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು.

ಹೈದರ್ – ಟಿಪ್ಪು ಮತ್ತು ದೊಡ್ಡವೀರರಾಜೇಂದ್ರನ ಸಂಘರ್ಷಗಳು: ಮತಾಂತರ ರಾಜಕಾರಣ ವಿಷಯದ ಬಗ್ಗೆ ಬೆಂಗಳೂರಿನ ಇತಿಹಾಸ ಉಪನ್ಯಾಸಕ ಡಾ.ಹಂ.ಗು.ರಾಜೇಶ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾವಹಿಸಿ ಗೋಷ್ಠಿ ನಡೆಸಿಕೊಡುವರು. ಅಪರಾಹ್ನ ಗಂಟೆ 2ರಿಂದ ಲಿಂಗರಾಜೇಂದ್ರ ಒಡೆಯರ್; ಅರಮನೆ ರಾಜಕೀಯ ಮತ್ತು ಹುಕುಂನಾಮೆಗಳು ವಿಷಯದ ಬಗ್ಗೆ ಮಡಿಕೇರಿ ಅಲ್ಲಾರಂಡ ರಂಗ ಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠ್ಠಲ ನಂಜಪ್ಪ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು. ಚಿಕ್ಕವೀರರಾಜೇಂದ್ರ ಒಡೆಯರ್ ಮತ್ತು ಪ್ರಧಾನ ದಿವಾನ ಬಸವಯ್ಯ ಸಾಮಾಜಿಕ ಸಂಘರ್ಷದ ಪರಮಾವಧಿ ಮತ್ತು ಗ್ರೇಟ್ ವಾರ್ ಆಫ್ 1834 ಎಗೇನೆಸ್ಟ್ ಬ್ರಿಟಿಷ್ ವಿಷಯದ ಬಗ್ಗೆ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಪ್ರಾಧ್ಯಾಪಕ ಡಾ.ಬಿ.ಎಂ.ಪುಟ್ಟಯ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಗೋಷ್ಠಿ ನಡೆಸಿಕೊಡುವರು. ಸಮಯ ಅಪರಾಹ್ನ ೩ಕ್ಕೆ 1837ರ ಅಮರ ಸುಳ್ಯ ಸಂಗ್ರಾಮ ಮತ್ತು ಪರಿಣಾಮಗಳು ವಿಷಯದ ಬಗ್ಗೆ ಸಂಶೋಧಕ ಕೆ.ಆರ್.ವಿದ್ಯಾಧರ ಹಾಗೂ ಅಮರ ಸುಳ್ಯ ಸಂಗ್ರಾಮ 1837: ಚರಿತ್ರೆ ರಚನೆ ಮತ್ತು ವಿಧಾನ ಕ್ರಮಗಳು ವಿಷಯದ ಬಗ್ಗೆ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಪ್ರದೀಪ ಕೆಂಚನೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗಹಿಸಿ ಗೋಷ್ಠಿ ನಡೆಸಿಕೊಡುವರು. ಸಂಜೆ ೪ರಿಂದ ೪.೩೦ರ ವರೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂಜೆ ೪.೩೦ರಿಂದ ಸಮಾರೋಪ ಸಮಾರಂಭ ನಡೆಯಲಿದೆ ಎಂದವರು ವಿವರ ನೀಡಿದರು.


ಬಂಟಮಲೆ ಅಕಾಡೆಮಿ ನಿರ್ದೇಶಕ ಎ.ಕೆ. ಹಿಮಕರ ಹಾಗೂ ಸಾಹಿತಿ ತೇಜಕುಮಾರ್ ಬಡ್ಡಡ್ಕ ಮಾತನಾಡಿ, ಇದೊಂದು ಶೈಕ್ಷಣಿಕ, ಬೌದ್ಧಿಕ ಚಿಂತನಾ ಚಟುವಟಿಕೆಗಳು. ಅಮರ ಸುಳ್ಯದ ಬಗ್ಗೆ ೭ ಪುಸ್ತಕಗಳು ಬಂದಿದೆ. ಜನರಲ್ಲಿ ಒಂದಷ್ಟು ಪ್ರಶ್ನೆಗಳಿದ್ದು ವಿಚಾರ ಸಂಕಿರಣದಲ್ಲಿ ಅವೆಲ್ಲವದಕ್ಕೆ ಉತ್ತರಗಳು ಸಿಗಲಿದೆ. ಸುಳ್ಯದಲ್ಲಿ ಮಹತ್ತರವಾದ ಘಟನೆಗಳು ನಡೆದಿದ್ದರೂ ಈಗಿನ ಪೀಳಿಗೆಗೆ ಅದು ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವ ಅವಕಾಶ. ಹಾಗೂ ಮುಂದಿನ ಅಭಿವೃದ್ಧಿಗೆ ಇದು ಕಾರಣವಾಗಬಹುದೆಂದು ಅವರು ವಿವರ ನೀಡಿದರು.


ಸುಳ್ಯದ ನಿರ್ದೇಶಕ ಎ.ಕೆ.ಹಿಮಕರ, ಕಾರ್ಯಕ್ರಮದ ಸಂಯೋಜಕಿ ಡಾ.ಅನುರಾಧಾ ಕುರುಂಜಿ, ಸಹ ಸಂಯೋಜಕರಾದ ಸಂಜೀವ ಕುದ್ಪಾಜೆ., ಉಪನ್ಯಾಸಕ ಲತೀಶ್ ಕುಮಾರ್ ಕೆ., ಯತೀಂದ್ರ ಕೆದಂಬಾಡಿ ಉಪಸ್ಥಿತರಿದ್ದರು.