ಶಾಲಾ ಮೈದಾನದಲ್ಲಿ ಧಾರ್ಮಿಕ ಆಚರಣೆಗೆ ನಿರ್ಬಂಧ : ಸುಳ್ಯದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಶಾಂತಿ ಸಭೆ

0

ಶಾಲಾ ಮೈದಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಬಾರದೆನ್ನುವ ಸರಕಾರದ ಸುತ್ತೋಲೆಯ ಹಿನ್ನಲೆಯಲ್ಲಿ ಪಕ್ಷಗಳ ನಾಯಕರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸಭೆ ಆಯೋಜನೆ ಮಾಡುವಂತೆ ಕೇಳಿಕೊಂಡಿರುವ ಮೇರೆಗೆ ಆ.೨೩ರಂದು ಸಂಜೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮಂಜುನಾಥ್‌ರ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಅಧ್ಯಕ್ಷರು, ಎಸ್.ಡಿ.ಎಂ.ಸಿ.ಯವರಿದ್ದು ಶಾಂತಿ ಸಭೆ ನಡೆಯಿತು.

ಸಭೆಯಲ್ಲಿ ಶಾಲಾ ಆವರಣದಲ್ಲಿ ಈ ಹಿಂದೆ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಯಾವುದೇ ನಿರ್ಬಂಧ ಬೇಡ. ಹಿಂದಿನಂತೆಯೇ ಮುಂದುವರಿಯಲಿ ಎಂದು ಸರ್ವಪಕ್ಷಗಳ ನಾಯಕರು ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಮಾಡಿಕೊಂಡರು.


ತಹಶೀಲ್ದಾರ್ ಮಂಜುನಾಥರು, ಸರಕಾರದ ನಿಯಮಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದಾಗ, ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್‌ರವರು ಒಂದು ಶಾಲೆಯ ಕುರಿತಾಗಿ ಹೊರಡಿಸಿದ ಆದೇಶ ಆ ಸುತ್ತೋಲೆ. ಅದು ಇಲ್ಲಿಗೆ ಅನ್ವಯವಾಗಲಿಕ್ಕಿಲ್ಲ. ಮತ್ತು ಈ ಹಿಂದೆ ಸೌಹಾರ್ದವಾಗಿ ಕಾರ್ಯಕ್ರಮಗಳು ನಡೆಯುತ್ತಿತ್ತು. ಅದೇ ರೀತಿ ನಡೆಯಲು ಅನುಮತಿ ನೀಡಬೇಕಾಗಿದೆ” ಎಂದು ಹೇಳಿದರು.


ಬಿ.ಇ. ಒ. ಶೀತಲ್ ಯು.ಕೆ.ಯವರು ಮಾತನಾಡಿ, ಇತ್ತೀಚೆಗೆ ಶಾಲೆಯಲ್ಲಿ ಅಹಿತಕರ ಘಟನೆ ನಡೆದ ಬಳಿಕ ಈ ಸುತ್ತೋಲೆಗೆ ಜೀವ ಬಂದಿದೆ.

ಮೇಲಾಧಿಕಾರಿಗಳ ಜತೆ ಚರ್ಚಿಸಿದಾಗ ಅನುಮತಿ ಕೊಡಬಾರದೆಂದು ಹೇಳಿದ್ದಾರೆ. ನಿಯಮ ಮೀರಿ ಮುಂದುವರಿಯಲು ಸಾಧ್ಯವಿಲ್ಲ'' ಎಂದು ಹೇಳಿದರು. ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ೩೦-೪೦ ವರ್ಷಗಳಿಂದ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಹೊಸದಾಗಿ ಆಗುವುದಲ್ಲ. ಆದ್ದರಿಂದ ಅದು ನಡೆಯಲುವಂತೆ ಆಗಬೇಕು. ಶಾಲೆಯ ಅಭಿವೃದ್ಧಿ ಸಾರ್ವಜನಿಕರ ಸಹಭಾಗಿತ್ವ ದಿಂದಲೇ ಆಗುವುದು. ಈಗ ಕಾರ್ಯಕ್ರಮಗಳಿಗೆ ಅನುಮತಿ ಸಿಗದೇ ಇದ್ದರೆ ಶಾಲೆಯ ಅಭಿವೃದ್ಧಿ ಕುಂಠಿತವಾಗಬಹುದು. ಶಾಲಾಭಿವೃದ್ದಿ ಮತ್ತು ಸಂಘಟನೆಯವರು ಜವಾಬ್ದಾರಿ ತೆಗೆದುಕೊಳ್ಳಲಿ” ಎಂದು ಸಲಹೆ ನೀಡಿದರು.


ನ.ಪಂ. ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ ಯಥಾಸ್ಥಿತಿ ಮುಂದುವರಿಯಲಿ. ಹಾಗಂದ ಮಾತ್ರಕ್ಕೆ ಕೋಮು ಪ್ರಚೋದನಾ ಭಾಷಣ ಬೇಡ.ಆ ಕುರಿತು ಸಂಘಟನೆಯವರು ಜಾಗರೂಕತೆ ಇರಬೇಕು'' ಎಂದು ಹೇಳಿದರು. ನ.ಪಂ. ಸದಸ್ಯ ಡೇವಿಡ್ ಧೀರಾ ಕ್ರಾಸ್ತ ಮಾತನಾಡಿ,ಚರ್ಚ್ ಆವರಣದಲ್ಲೇ ವಿದ್ಯಾಸಂಸ್ಥೆ ಇರುವುದು. ಅಲ್ಲಿ ಎಲ್ಲ ಹಬ್ಬಗಳು ನಡೆಯುತ್ತದೆ. ನಿರ್ಬಂಧ ಹೇರುವ ಕ್ರಮ ಬೇಡ” ಎಂದು ಹೇಳಿದರು.


ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ, ಡಿಸಿಸಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಮೀನುಗಾರಿಕಾ ನಿಗಮ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ಜೆಡಿಎಸ್ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಬಿಜೆಪಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿನಯ ಕುಮಾರ್ ಮುಳುಗಾಡು ಅಭಿಪ್ರಾಯ ವ್ಯಕ್ತ ಪಡಿಸಿ, “ಹಲವು ವರ್ಷಗಳಿಂದ ಧಾರ್ಮಿಕ ಆಚರಣೆಗಳು ಶಾಲೆಗಳಲ್ಲಿ ಇವೆ. ಅದು ಯಥಾಸ್ಥಿತಿಯಲ್ಲಿ ಮುಂದುವರಿಸಲಿ. ಊರವರೇ ಸೇರಿ ಮಾಡುವ ಕ್ರೀಡಾ ಕೂಟಗಳು ಅವು” ಎಂದು ಹೇಳಿದರು.
ಎಸ್.ಐ. ಈರಯ್ಯರು ಕಾನೂನು ನಿಯಮಗಳ ಕುರಿತು ವಿವರ ನೀಡಿದರು.


ಸಭೆಯಲ್ಲಿ ನ.ಪಂ. ಸದಸ್ಯರುಗಳಾದ ವಿನಯ ಕುಮಾರ್ ಕಂದಡ್ಕ, ರಾಜು ಪಂಡಿತ್, ಸುಳ್ಯ ಸ.ಪ.ಪೂ. ಕಾಲೇಜು ಎಸ್.ಡಿ.ಎಂ.ಸಿ. ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ, ಉಬರಡ್ಕ ಯುವಕ ಮಂಡಲದ ದೇವಪ್ಪ ಆಚಾರ್ಯ ಕಲ್ಚಾರ್, ರಾಜೇಶ್ ರೈ ಉಬರಡ್ಕ, ನಂದರಾಜ ಸಂಕೇಶ, ಭಗವತೀ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕೇರ್ಪಳ, ಕೇರ್ಪಳ ಯುವಕ ಮಂಡಲದ ಗೌರವಾಧ್ಯಕ್ಷ ಶಿವಪ್ರಸಾದ್ ಕೇರ್ಪಳ, ಅರಂಬೂರು ಭಜನಾ ಮಂದಿರದ ರತ್ನಾಕರ ರೈ ಅರಂಬೂರು, ಅಜ್ಜಾವರ ಗ್ರಾ.ಪಂ. ಸದಸ್ಯ ಅಬ್ದುಲ್ಲ ಅಜ್ಜಾವರ, ಗ್ರೀನ್ ಬಾಯ್ಸ್ ಬಳಗದ ಅಬ್ದುಲ್ ರಶೀದ್ ಜಟ್ಟಿಪಳ್ಳ,ಮೇನಾಲ ಶ್ರೀಕೃಷ್ಣ ಭಜನಾ ಮಂದಿರದ ನಯನ ರೈ ಮೇನಾಲ, ಸಯನಿಲ್ ರೈ ಮೇನಾಲ, ಬಾಲಕೃಷ್ಣ ಮೇನಾಲ, ಆರ್‌ಐ.ಗಳಾದ ಅವಿನ್ ಹಾಗೂ ರಂಜನ್ ಕಲ್ಕುದಿ, ಶಿಕ್ಷಣ ಸಂಯೋಜಕಿ ಧನಲಕ್ಷ್ಮೀ ಕುದ್ಪಾಜೆ, ಸುಳ್ಯ ಹಾಗೂ ಬೆಳ್ಳಾರೆ ಪೋಲೀಸರು ಸಭೆಯಲ್ಲಿದ್ದರು.