ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಸುಳ್ಯ ಸ. ಮಾ. ಹಿ. ಪ್ರಾ. ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

0

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಸುಳ್ಯ ಸ ಮಾ ಹಿ ಪ್ರಾ. ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಆ 23 ರಂದು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಎಂಬ ವಿಷಯದ ಕುರಿತು ಕಾನೂನು ಅರಿವು ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.

ಸುಳ್ಯ ನ್ಯಾಯಲಯದ ಸಿವಿಲ್ ನ್ಯಾಯಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಅರ್ಪಿತಾ ರವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು.


ಈ ವೇಳೆ ಮಾತನಾಡಿದ ಅವರು ‘ಪ್ರತಿಯೊಬ್ಬರಿಗೂ ಮೂಲಭೂತವಾಗಿ ಇರುವ ಹಕ್ಕುಗಳು ಎಷ್ಟು ಮುಖ್ಯವೋ, ಹಾಗೆಯೇ ಅವರವರ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಅಷ್ಟೇ ಮುಖ್ಯ.ಆದ್ದರಿಂದ ನಮ್ಮ ಸಂವಿಧಾನವು ನಮಗೆ ನೀಡಿರುವ ಹಕ್ಕುಗಳನ್ನು ಯಾವುದೇ ರೀತಿಯಲ್ಲಿ ದುರುಪಯೋಗ ವಾಗದಂತೆ ನಾವು ನೋಡಿಕೊಳ್ಳಬೇಕು. ಇದನ್ನು ವಿದ್ಯಾರ್ಥಿಗಳು ತಮ್ಮ ಬಾಲ್ಯ ಜೇವನದಲ್ಲಿಯೇ ರೂಢಿಸಿ ಕೊಂಡು ಮುಂದೆ ಉತ್ತಮ ನಾಗರಿಕರಾಗಿ ಬೆಳೆಯ ಬೇಕೆಂದು ಅರಿವು ಮೂಡಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲೆ ಕು.ಲಿಕಿತ ಕೆ ವಿ ಯವರು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ್ಯೋಪಾಧ್ಯಾಯಿನಿ ಶ್ರೀಮತಿ ಸುನಂದಾ ಶೆಟ್ಟಿ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಸುಳ್ಯ ವಕೀಲರ ಸಂಘದ ಪ್ರ. ಕಾರ್ಯದರ್ಶಿ ಜಗದೀಶ್ ಡಿ ಪಿ, ಸಹಾಯಕ ಸರಕಾರಿ ಅಭಿಯೋಜಕ ಆರೋನ್ ಡಿ’ ಸೋಜ, ಶಾಲಾ ಸಹ ಶಿಕ್ಷಕಿ ಶೀಲಾವತಿ ಬಿ ಎ,ಪ್ಯಾನಲ್ ವಕೀಲರಾದ ಚರಣ್ ರಾಜ್ ಕೆ ಎಂ ಉಪಸ್ಥಿತರಿದ್ದರು.

ಶಿಕ್ಷಕ ಚಂದ್ರಶೇಖರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವಿದ್ಯಾರ್ಥಿಗಳು, ವಕೀಲರು,ನ್ಯಾಯಾಲಯದ ಸಿಬ್ಬಂದಿಗಳು, ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.