ಕೆವಿಜಿ ಐಪಿಎಸ್ ನಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ

0

ಬುದ್ಧಿವಂತಿಕೆ ನಮ್ಮ ದಿನನಿತ್ಯದ ಜೀವನದಲ್ಲಿ ಅತಿ ಅವಶ್ಯಕ :ಡಾ. ಉಜ್ವಲ್ ಯು.ಜೆ.

ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ : ಚಿದಾನಂದ ಬಾಳಿಲ

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆ. 26ರಂದು ಅತಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ, ಕೆ.ವಿ.ಜಿ ಐ.ಟಿ.ಐ ನ ಪ್ರಾಂಶುಪಾಲ ಚಿದಾನಂದ ಬಾಳಿಲ, ಸುಳ್ಯ ನಗರ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ಕೆವಿಜಿ ಡೆಂಟಲ್ ಕಾಲೇಜಿನ ವೈದ್ಯ ಡಾ. ರೇವಂತ್,ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಮತ್ತು ಕೃಷ್ಣವೇಷ ಧರಿಸಿದ ಪುಟಾಣಿ ಮಕ್ಕಳು ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಉಜ್ವಲ್ ಯು ಜೆ ‘ ಕೃಷ್ಣನ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ನಾವು, ಅವನಂತೆ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಕೆಲಸವನ್ನು ಮಾಡೋಣ. ಕೃಷ್ಣನ ಅನುಗ್ರಹ ಸದಾ ನಮ್ಮ ಮೇಲೆ ಇರಲಿ ‘ ಎಂದು ಹೇಳಿದರು.

ಬಳಿಕ ಮಾತನಾಡಿದ ಚಿದಾನಂದ ಬಾಳಿಲ ‘ ಮರ ಚೆನ್ನಾಗಿರಬೇಕಾದರೆ ಚಿಗುರು ಚೆನ್ನಾಗಿರಬೇಕು. ಅದರಂತೆ ನಾವು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ‘ ಎಂದರು.
ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ‘ ಮಾನವ ಜೀವನದಲ್ಲಿ ಶಾಂತಿ ಮತ್ತು ಮೌಲ್ಯಯುತವಾದ ಜೀವನವನ್ನು ನಡೆಸಿ ನಾವು ಇನ್ನೊಬ್ಬರಿಗೆ ಆದರ್ಶವಾಗಿರೋಣ’ ಎಂದು ತಿಳಿಸಿದರು.

ಬಳಿಕ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು  ಕೃಷ್ಣನ ಪೌರಾಣಿಕ ಕಥೆಯ ನಾಟಕ ಮತ್ತು ನೃತ್ಯವನ್ನು ಮಾಡಿ ಎಲ್ಲರ ಗಮನ ಸೆಳೆದರು.

10ನೇ ತರಗತಿಯ ಅಶ್ವಿತ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಮಹತ್ವದ ಕುರಿತು ತಿಳಿಸಿದಳು.

       ಈ ಸಂದರ್ಭದಲ್ಲಿ ಕೆವಿಜಿ ಕಿಂಡರ್ ಗಾರ್ಡನ್ ನ ಮಕ್ಕಳಿಗೆ  ಕೃಷ್ಣ ವೇಷ  ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗೆ ಕೆವಿಜಿ ಡೆಂಟಲ್ ಕಾಲೇಜಿನ ಡಾ. ಅನುಪಮಾ ಆರ್‌.ಪಿ , ಡಾ. ಭೂಮಿಕಾ ಮತ್ತು ಡಾ . ಪ್ರಕೃತಿ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು.   

ಬಳಿಕ ಮನೋರಂಜನೆಗಾಗಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ಶಿಕ್ಷಕೇತರ ವರ್ಗದವರಿಗೆ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಮುಂದಾಳತ್ವವನ್ನು ಶಾಲಾ ಸಾಂಸ್ಕೃತಿಕ ಸಂಯೋಜನಾಧಿಕಾರಿ ಪ್ರಜ್ಞ ಡಿ ಆರ್ ವಹಿಸಿ ಕೊಂಡರು. ಕಾರ್ಯಕ್ರಮವನ್ನು ರಿಮಾ ಫಾತಿಮಾ ನಿರೂಪಿಸಿ, ಅನೀಶ್ ಸ್ವಾಗತಿಸಿ ಗಾಯಕ್ ವಂದಿಸಿದನು.