ಮುಪ್ಪೇರ್ಯ ಗ್ರಾಮದ ತೆಕ್ಕೆಕರೆ ನಿವಾಸಿ ಡಾ. ಪಲ್ಲವಿ ತೆಕ್ಕೆಕರೆಯವರು ವೈದ್ಯಕೀಯ ಸ್ನಾತಕೋತ್ತರ NEET ಪರೀಕ್ಷೆಯಲ್ಲಿ ಅಖಿಲಭಾರತ ಮಟ್ಟದಲ್ಲಿ 335ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
2024ರ ಆಗಷ್ಟ್ ತಿಂಗಳಲ್ಲಿ ನಡೆದ ವೈದ್ಯಕೀಯ ಸ್ನಾತಕೋತ್ತರ ಪದವಿಯ NEET ಪರೀಕ್ಷೆಗೆ ದೇಶದಾದ್ಯಂತ ಹಾಜರಾದ 2.5 ಲಕ್ಷ ವಿದ್ಯಾರ್ಥಿಗಳಲ್ಲಿ ಪಲ್ಲವಿ ತೆಕ್ಕೆಕರೆಯವರು 335 ರ್ಯಾಂಕ್ ಪಡೆದು ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪದವಿ ಮುಗಿಸಿ ಬಳಿಕ ಇಂಟರ್ನ್ ಶಿಪ್ ಕೂಡ ಪೂರೈಸಿರುವ ಇವರು ಮುಪ್ಪೇರ್ಯ ಗ್ರಾಮದ ತೆಕ್ಕೆಕರೆ ಸದಾಶಿವ ಭಟ್ ಮತ್ತು ಶ್ರೀಮತಿ ಸುಧಕ್ಷಿಣಿ ದಂಪತಿಯ ಪುತ್ರಿ. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಪೂರೈಸಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೆಂಗಳೂರಿನ ಜೆ.ಜಿ.ಆರ್.ವಿ.ಕೆ ಸೆಂಟ್ರಲ್ ಸ್ಕೂಲ್ ನಲ್ಲಿ 10ಸಿಜಿಪಿಎ ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಎಂ.ಬಿ.ಬಿ.ಎಸ್. ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 223 ರ್ಯಾಂಕ್ ಪಡೆದಿದ್ದ ಇವರು ಚೆಸ್ ನಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿರುವುದಲ್ಲದೆ, ಅಖಿಲಭಾರತ ವಿದ್ಯಾಭಾರತಿ ಶಾಲೆಗಳ ರಾಷ್ಟ್ರ ಮಟ್ಟದ ತ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಶಾಲಾ ಶಿಕ್ಷಣದೊಂದಿಗೆ ಸಂಗೀತ ಕ್ಷೇತ್ರದಲ್ಲೂ ವಿಶೇಷ ಸಾಧನೆ ಮಾಡಿರುವ ಡಾ. ಪಲ್ಲವಿ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ವೀಣೆ ಮತ್ತು ಡ್ರಾಯಿಂಗ್ ಕ್ಷೇತ್ರದಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ. ಮುಂದೆ ಜನರಲ್ ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಕನಸ್ಸನ್ನು ಹೊಂದಿದ್ದಾರೆ.