ಟಿ.ಎಂ ಶಹೀದ್ ತೆಕ್ಕಿಲ್ ಅಭಿನಂಧನಾ ಸಮಿತಿ ವತಿಯಿಂದ ಡಾ. ಪುರುಷೋತ್ತಮ ಬಿಳಿಮಲೆ ಹಾಗೂ ಶಹೀದ್ ತೆಕ್ಕಿಲ್ ಅವರಿಗೆ ಸನ್ಮಾನ

0

ಶಿಕ್ಷಣ ಸಂಸ್ಥೆಗಳು ಆಧುನಿಕ ಶಿಕ್ಷಣಕ್ಕೆ ಒತ್ತು ನೀಡಬೇಕು- ಡಾ. ಬಿಳಿಮಲೆ

ಟಿ.ಎಂ ಶಹೀದ್ ತೆಕ್ಕಿಲ್ ಅಭಿನಂಧನಾ ಸಮಿತಿ ವತಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆಯವರಿಗೆ ಹಾಗೂ ಟಿ.ಎಂ. ಶಹೀದ್ ತೆಕ್ಕಿಲ್ ಅವರಿಗೆ
ಸನ್ಮಾನ ಸಮಾರಂಭವು ಅರಂತೋಡಿನ ಟಿ.ಎಂ. ಶಹೀದ್ ಅವರ ಮನೆಯಲ್ಲಿ ಸೆ.2 ರಂದು ನಡೆಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಟಿ.ಎಂ. ಶಹೀದ್ ಅವರ ಮನೆಗೆ ಭೇಟಿ ನೀಡಿ ಹಿಂದೆ ನಡೆದ ಟಿ.ಎಂ ಶಹೀದ್ ತೆಕ್ಕಿಲ್ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಟಿ.ಎಂ. ಶಹೀದ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಟಿ.ಎಂ ಶಹೀದ್ ತೆಕ್ಕಿಲ್ ಅಭಿನಂದನಾ ಸಮಿತಿ ವತಿಯಿಂದ ಡಾ. ಪುರುಷೋತ್ತಮ ಬಿಳಿಮಲೆಯವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿದ ಡಾ. ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ ಟಿ.ಎಂ ಶಹೀದ್ ಅವರು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿರುವುದಲ್ಲದೆ ಸಾಮಾಜಿಕ ಚಟುವಟಿಕೆಗಳಿಂದ ಕ್ರೀಯಾಶೀಲರಾಗಿ ರಸ್ತೆ, ಸೇತುವೆ, ಶಿಕ್ಷಣಸಂಸ್ಥೆ, ಸಮುದಾಯ ಭವನಗಳಿಗೆ ಸರಕಾರದಿಂದ ಅನುದಾನವನ್ನು ಒದಗಿಸಿಕೊಟ್ಟಿರುವುದು ಶ್ಲಾಘನೀಯ. ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆಗಳು ಆಧುನಿಕ ಶಿಕ್ಷಣಕ್ಕೆ ಒತ್ತು ನೀಡಬೇಕು ಬೀದರ್ ನಲ್ಲಿರುವ ಶಾಹೀನ್ ಶಿಕ್ಷಣ ಸಂಸ್ಥೆ ಉತ್ತಮ ಆಧುನಿಕತೆಯ ಶಿಕ್ಷಣವನ್ನು ನೀಡುತ್ತಿದೆ ಮುಸಲ್ಮಾನರು ಇಂಗ್ಲೀಷರ ವಿರುದ್ಧ ಹೋರಾಟ ಮಾಡಿದವರು. ಆದರೆ ಇಂಗ್ಲೀಷ್ ಭಾಷೆಯನ್ನು ಕಲಿಯಲಿಲ್ಲ, ಉರ್ದು ಶಾಲೆಗಳನ್ನು ತೆರೆದರು. ಮದರಸದಲ್ಲಿಯು ಕನ್ನಡವನ್ನು ಕಲಿಸಬೇಕೆಂಬ ಒತ್ತಾಸೆ ನಮ್ಮದು. ಮುಸ್ಲಿಮರಲ್ಲಿ ಅನೇಕ ಕನ್ನಡ ಪಾಂಡಿತ್ಯವುಳ್ಳ ಲೇಖಕರು ಸಾಹಿತಿಗಳು ಇದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು ಶುಭಹಾರೈಸಿದರು. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಟಿ.ಎಂ. ಶಹೀದ್ ತೆಕ್ಕಿಲ್ ಅಭಿನಂದನಾ ಸಮಿತಿ ಸಂಚಾಲಕ ಕೆ.ಟಿ.ವಿಶ್ವನಾಥ್, ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ ಸಿದ್ಧೀಕ್ ಕೊಕ್ಕೊ, ಧಾರ್ಮಿಕ ಪರಿಷತ್ ಸದಸ್ಯ ಲಕ್ಷೀಶ ಗಬ್ಬಲಡ್ಕ, ಲೇಖಕಿ ಸಹನಾ ಕಾಂತಬೈಲು, ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಸಂಪತ್, ಮಹ್ಮದ್ ಆರಿಫ್, ಶಿಕ್ಷಕಿಯರಾದ ಸಾಧಿಕಾ, ಆಯಿಷತ್ತುಲ್ ಸುನೈನಾ, ಮಿಶ್ರಿಯ, ಆಯಿಷತುಲ್ ನೌಫಿಯ, ಮೆಹ್ತನಾಝ್ ಮೊದಲಾದವರು ಉಪಸ್ಥಿತರಿದ್ದರು.