ಹೆತ್ತ ತಾಯಿ, ಹೊತ್ತ ಭೂಮಿ ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸುವುದನ್ನು ರೂಡಿಸಿಕೊಳ್ಳಿ: ಚಂದ್ರಶೇಖರ ಪೇರಾಲು
ವಿದ್ಯಾರ್ಥಿಗಳಿಂದ ಸಂಭ್ರಮದ ಸಾಂಸ್ಕೃತಿಕ ವೈವಿಧ್ಯ
ಶಿಕ್ಷಕ ವೃತ್ತಿಯು ಅತ್ಯಂತ ಗೌರವಯುತವಾದುದು. ಹಿಂದೆ ಸಮಾಜದಲ್ಲಿ ಪ್ರತಿ ಸಭೆ ಸಮಾರಂಭಗಳಲ್ಲಿ ಶಿಕ್ಷಕರ ಉಪಸ್ಥಿತಿ ಅತ್ಯಂತ ಅಗತ್ಯವಾಗಿತ್ತು ಹಾಗೂ ಅವರೇ ಯಾವುದೇ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದರು. ಅಂತೆಯೇ ಹೆಚ್ಚಿನ ಸ್ಥಾನಮಾನಗಳನ್ನು ಪಡೆದುಕೊಳ್ಳುತ್ತಿದ್ದರು. ಹೆತ್ತ ತಾಯಿ, ಹೊತ್ತ ಭೂಮಿ, ವಿದ್ಯೆ ಕಲಿಸಿದ ಗುರುಗಳನ್ನು ಗೌರವದಿಂದ ಕಂಡರೆ ಬದುಕಿನಲ್ಲಿ ಯಶಸ್ಸು ಖಂಡಿತ ಎಂದು ತಾಲೂಕು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು ಹೇಳಿದರು. ಇವರು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 5 ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನರವ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು. ನಂತರ ನೆನಪಿನ ದ್ಯೋತಕವಾಗಿ ಕಾಲೇಜಿನ ಎಲ್ಲಾ ಉಪನ್ಯಾಸಕ ಉಪನ್ಯಾಸಕೇತರ ವೃಂದದವರಿಗೆ ಪುಸ್ತಕ ಮತ್ತು ಪೆನ್ ಉಡುಗೊರೆಯಾಗಿ ನೀಡಿದರು.
ಸಭೆಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಲೇಜಿನ ಗೌರವ ಶೈಕ್ಷಣಿಕ ಸಲಹೆಗಾರರಾದ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಬಾಲಚಂದ್ರ ಎಂ. ಇವರು ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿ, ಸಂಸ್ಥೆಯಲ್ಲಿರುವ ದಕ್ಷ ಪ್ರಾಮಾಣಿಕ ಶಿಕ್ಷಕರ ಶ್ರಮವನ್ನು ಪ್ರಶಂಸಿಸಿ, ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಶುಭಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ನ್ಯಾಕ್ ಸಂಯೋಜಕಿ ಡಾ. ಮಮತಾ ಕೆ ಉಪಸ್ಥಿತರಿದ್ದರು.
ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಕು. ಅಭಿಜ್ಞಾ ಪ್ರಾರ್ಥಿಸಿ, ಕು. ಸಾನಿಧ್ಯ ಸ್ವಾಗತಿಸಿ, ಕಾಲೇಜು ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಕು. ಉಜಾನ ಧನ್ಯವಾದ ಸಮರ್ಪಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿ ಕೌಶಿಕ್ ಮತ್ತು ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಕು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.
ಅಂತಿಮ ಕಲಾ ಪದವಿ ವಿದ್ಯಾರ್ಥಿನಿ ಕು. ಪ್ರಾಪ್ತಿ ಶಿಕ್ಷಕರ ಕುರಿತಾಗಿ ಮಾತನಾಡಿ ಸ್ವ ರಚಿತ ಕವನವನ್ನು ವಾಚಿಸಿದರು.
ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ರಂಜಿಸಿದರು. ಸಿಹಿತಿಂಡಿ ಹಂಚಿದರು. ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.