ಬಿ.ಎಸ್.ಎನ್.ಎಲ್. ಇಲಾಖೆ ಅಧಿಕಾರಿಗಳ ಸ್ಪಂದನೆ
ಚೆಂಬು ಗ್ರಾಮದ ಬಹುತೇಕ ಕಡೆಗಳಲ್ಲಿ ಯಾವುದೇ ಮೊಬೈಲ್ ನೆಟ್ವರ್ಕ್ ಸೌಲಭ್ಯ ಇಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿಯಲ್ಲಿದ್ದು, ಈ ಬಗ್ಗೆ ಗ್ರಾಮಸ್ಥರು ಬಿ.ಎಸ್.ಎನ್.ಎಲ್. ಇಲಾಖೆಗೆ ಟವರ್ ನಿರ್ಮಿಸುವಂತೆ ಸಲ್ಲಿಸಿದ್ದ ಮನವಿಗೆ ಇದೀಗ ಬಿ.ಎಸ್.ಎನ್.ಎಲ್. ಇಲಾಖೆಯ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಗ್ರಾಮದ ಡಬ್ಬಡ್ಕ, ಉಂಬಳೆ ಹಾಗೂ ಪನೇಡ್ಕ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಂಪರ್ಕ ದುಸ್ತರ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸಾಮ್ಯದ ಬಿ.ಎಸ್.ಎನ್.ಎಲ್. ಇಲಾಖೆಗೆ ಗ್ರಾಮಸ್ಥರು ಈ ಹಿಂದೆ ಮನವಿ ಸಲ್ಲಿಸಿದ್ದರು.
ಇತ್ತೀಚೆಗೆ ಮನವಿಗೆ ಸ್ಪಂದಿಸಿದ್ದ ಅಧಿಕಾರಿಗಳು ಗ್ರಾಮಸ್ಥರನ್ನು ಸಂಪರ್ಕ ಮಾಡಿ ಟವರ್ ನಿರ್ಮಾಣಕ್ಕೆ ಸೂಕ್ತ ಸ್ಥಳ ಹಾಗೂ ಇತರ ವಿವರಣೆಗಳನ್ನು ಕೇಳಿದ್ದರು.
ಇದೀಗ ಗ್ರಾಮಸ್ಥರ ಪರವಾಗಿ, ಮತ್ತೊಮ್ಮೆ ಗ್ರಾಮಸ್ಥರ ಸಹಿ ಇರುವ ಮನವಿಯನ್ನು ಬಿ.ಎಸ್.ಎನ್.ಎಲ್. ಇಲಾಖೆಯ ಅಧಿಕಾರಿಗೆ ನೀಡಲಾಗಿದ್ದು, ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಇಲಾಖೆಯ ವತಿಯಿಂದ ಕೂಡಲೇ ಒಂದು ತಂಡವನ್ನು ಚೆಂಬು ಗ್ರಾಮಕ್ಕೆ ಕಳುಹಿಸುವುದಾಗಿಯೂ ಹಾಗೂ ಅವರಿಗೆ ಎಂ.ಚೆಂಬು ಭಾಗದ ರೆಂಕಿಲ್ ಮೊಟ್ಟೆ ಬಳಿ ಜಾಗವನ್ನು ತೋರಿಸುವಂತೆಯೂ ಗ್ರಾಮಸ್ಥರಿಗೆ ತಿಳಿಸಲಾಗಿದೆ.
ಜಾಗ ಸೂಕ್ತ ಅನಿಸಿದರೆ ಮುಂದಿನ ಕ್ರಮಕ್ಕೆ ಕೇಂದ್ರ ಅಧಿಕಾರಿಗಳನ್ನು ಸಂಪರ್ಕಿಸಿ ಅತೀ ಶೀಘ್ರದಲ್ಲಿ ಟವರ್ ಕಾಮಗಾರಿಗೆ ಚಾಲನೆ ನೀಡುವುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು.