ಕಲ್ಚೆರ್ಪೆಯಲ್ಲಿ ನಗರದ ಕಸ : ಶಾಸಕರ ಮಾತಿಗೂ ಬೆಲೆ ನೀಡದ ನಗರ ಪಂಚಾಯತ್ – ಹೋರಾಟ ಸಮಿತಿ

0

ಕಪ್ಪು ಪಟ್ಟಿ ಧರಿಸಿ ಸೆ.15 ರ ಮಾನವ ಸರಪಳಿಯಲ್ಲಿ ಭಾಗವಹಿಸಲು ನಿರ್ಧಾರ

ವಿನಯ ಕಂದಡ್ಕರಿಗೆ ಕಲ್ಚೆರ್ಪೆ ಪ್ರದೇಶ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ ; ಎನ್.ಎ. ರಾಮಚಂದ್ರರು ಕಲ್ಚೆರ್ಪೆ ಕಸ ತಂದವರು : ಸಮಿತಿ ಮುಖಂಡರ ಆರೋಪ

ನ.ಪಂ. ಸದಸ್ಯರಿಗೆ ಗ್ರಾಮ ವಾಸ್ತವ್ಯದ ಆಹ್ವಾನ : ಕಲ್ಚೆರ್ಪೆಯಲ್ಲಿ ಕುಳಿತು ಊಟ ಮಾಡಲಿ !

ಸುಳ್ಯ ನಗರದ ಕಸವನ್ನು ಕಲ್ಚೆರ್ಪೆಗೆ ತಂದು ಹಾಕಿ ಅಲ್ಲಿಯ ನಿವಾಸಿಗಳು ಪ್ರತೀ ದಿನವು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದನ್ನು ನಗರ ಪಂಚಾಯತ್ ನಿಲ್ಲಿಸಿ, ಪರಿಸರದ ಜನರ ಜೀವ ರಕ್ಷಿಸಬೇಕು. ಅಲ್ಲಿ ಉದ್ಭವಿಸುವ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬೇಕು. ಹಾಗೂ ಜನರಿಗೆ ಶುದ್ಧ ಕುಡಿಯುವ ನೀರು ನೀಡಬೇಕು ಇದಕ್ಕಾಗಿ ಸೆ.15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ನಡೆಯುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕಲ್ಚೆರ್ಪೆ ಪರಿಸರದ 30 ಮನೆಯವರು ಕಪ್ಪು ಪಟ್ಟಿ ಧರಿಸಿ ಮಾನವ ಸರಪಳಿಯಲ್ಲಿ ಭಾಗವಹಿಸಲಿದ್ದೇವೆ ಎಂದು ಕಲ್ಚೆರ್ಪೆಯ ಪರಿಸರ ಹೋರಾಟ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.

ಸೆ.13ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೋರಾಟ ಸಮಿತಿಯ ಅಧ್ಯಕ್ಷ, ಆಲೆಟ್ಟಿ ಗ್ರಾ.ಪಂ. ಸದಸ್ಯ ಸುದೇಶ್ “ಕಲ್ಚೆಪೆಯಲ್ಲಿ ನಗರದ ಕಸ ತಂದು ಹಾಕಿರುವುದರಿಂದ ದಿನವೂ ಆ ಪರಿಸರದವರು ಸಮಸ್ಯೆ ಎದುರಿಸುತ್ತಿದ್ದಾರೆ. ಕಸ ಬರಬಾರದೆಂದು ನಾವು ಹೋರಾಟ ನಡೆಸಿದರೂ, ಆ ಸಂದರ್ಭ ನಮಗೆ ಭರವಸೆ ಸಿಗುತ್ತಿದೆ ಹೊರತು ಕಸ ತರುವುದು ಕಡಿಮೆಯಾಗಿಲ್ಲ. ಈಗ ನಾವು ಸಮಿತಿಯೊಂದನ್ನು ಮಾಡಿಕೊಂಡು ಹೋರಾಟಕ್ಕೆ ಇಳಿದಿದ್ದೇವೆ. ಈಗಾಗಲೇ ೨೫೦ ಮಂದಿ ಸದಸ್ಯರು ನಮ್ಮ ಸಮಿತಿಯಲ್ಲಿದ್ದಾರೆ. ಮತ್ತು ಅಲ್ಲಿ ನಗರದ ಕಸ ಹಾಕುವುದಕ್ಕೆ ಆಲೆಟ್ಟಿ ಗ್ರಾ.ಪಂ.ಮನ ವಿರೋಧವಿದೆ. ಸುಳ್ಯದ ಕಸ ಹಾಕಲು ಸುಳ್ಯದಲ್ಲೇ ಯಾಕೆ ಜಾಗ ಹುಡುಕಲು ಸಾಧ್ಯವಾಗುತ್ತಿಲ್ಲ. ಆಧುನೀಕ ರೀತಿಯಲ್ಲಿ ಮಾಡುತ್ತೇವೆ ಎಂದು ಪಂಚಾಯತ್ ಹೇಳಿದ್ದರೂ ಆ ರೀತಿ ನಡೆಯುತ್ತಿಲ್ಲ. ಕೋಟಿ ಗಟ್ಟಲೆ ಹಣ ಸುರಿದರೇ ಹೊರತು ನಿಯಮ ಪ್ರಕಾರ ಕೆಲಸವನ್ನು ಮಾಡಿಲ್ಲ” ಎಂದು ಹೇಳಿದರು.

ಹೋರಾಟ ಸಮಿತಿಯ ಉಪಾಧ್ಯಕ್ಷ ಅಶೋಕ್ ಪೀಚೆ ಮಾತನಾಡಿ, ಮೊನ್ನೆ ಶಾಸಕರು ನ.ಪಂ. ನಲ್ಲಿ ನಡೆಸಿದ ಸಭೆಗೆ ಪರಿಸರದ ನಿವಾಸಿಗಳಾದ ನಾವು ಹೋಗಿದ್ದೆವು. ಕಲ್ಚೆರ್ಪೆಗೆ ಕಸ ಹಾಕಬಾರದು. ಬೇರೆ ಜಾಗ ಗುರುತಿಸುವಂತೆ ಸ್ಪಷ್ಟವಾಗಿ ಅವರು ಹೇಳಿದ್ದಾರೆ. ಆದರೆ ಬಳಿಕ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ವಿನಯ ಕಂದಡ್ಕರ ಹೇಳಿಕೆ ಶಾಸಕರ ನಿರ್ಧಾರಕ್ಕೆ ವಿರುದ್ಧವಾಗಿದೆ. ಈ ಹಿಂದೆ ಅಧಿಕಾರಿಗಳು ಸಮರ್ಪಕವಾಗಿ ಕಸ ವಿಲೇವಾರಿ ಮಾಡಿಲ್ಲ. ಇನ್ನು ಮುಂದೆ ಕಲ್ಚೆಪೆಯಲ್ಲೇ ಜನರಿಗೆ ತೊಂದರೆಯಾಗದಂತೆ ಕಸ ಹಾಕುವ ನಿರ್ಧಾರದ ಮಾತನ್ನಾಡಿದ್ದಾರೆ. ಇದರಿಂದ ನಮಗೆ ಮತ್ತೆ ಆತಂಕ ಎದುರಾಗಿದೆ. ಶಾಸಕರು ಕಲ್ಚೆರ್ಪೆಗೆ ಬಂದು ಅಲ್ಲಿಯ ಸ್ಥಳ ವೀಕ್ಷಣೆ ಮಾಡಿ ಸಮಸ್ಯೆ ಅರಿತು ಕಸ ತೆಗೆದುಕೊಂಡು ಹೋಗುವುದು ಬೇಡ ಎಂದು ಹೇಳಿದ ಮೇಲೆ ವಿನಯ ಕಂದಡ್ಕರು ಕಲ್ಚೆರ್ಪೆಗೆ ಕಸ ಹಾಕಬೇಕೆಂದು ಯಾಕೆ ಹೇಳುತ್ತಾರೆ. ನಮ್ಮ ಮೇಲೆ ಯಾಕೆ ಅವರಿಗೆ ಕೋಪ ಎಂದು ಪ್ರಶ್ನಿಸಿದರಲ್ಲದೆ, ಕಲ್ಚೆರ್ಪೆಯ ನೀರು ಪಯಸ್ವಿನಿ ಸೇರಿ ಅದನ್ನೆ ನಗರದ ಜನರು ಕುಡಿಯುತ್ತಿದ್ದಾರೆ ಎಂದು ಹೇಳಿದರು. ವಿನಯ ಕಂದಡ್ಕರು ಕಸದ ನಿರ್ವಹಣೆ ನಾನೇ ಮಾಡುತ್ತೇನೆ ಎಂದು ಹೇಳುತ್ತಾರಾದರೆ ಈಗಿನ ಅಧ್ಯಕ್ಷರಿಗೆ ಕಸ ನಿರ್ವಹಣೆಯ ಸಾಮರ್ಥ್ಯ ಇಲ್ಲವೆಂದು ಅರ್ಥವಾ?” ಎಂದು ಅಶೋಕ್ ಪ್ರಶ್ನಿಸಿ, ಕಲ್ಚೆರ್ಪೆಯ ಬರ್ನಿಂಗ್ ಮೆಷಿನ್ ಅಳವಡಿಕೆ ಸಂದರ್ಭ ದೇಶದಲ್ಲೇ ನಂಬರ್ ೧ ಎಂದು ಹೇಳಿದ್ದರು. ಆದರೆ ಇಂದು ಹೇಗಿದೆ ಅದು? ಅದರಿಂದ ಕ್ಯಾಸ್ ಉತ್ಪತ್ತಿ ಆಗುತ್ತಿದೆಯಾ? ಫ್ರೀ ಗ್ಯಾಸ್ ಯಾರಿಗೆ ಕೊಟ್ಟಿದ್ದೀರಿ ? ಆಡಳಿತ ನಡೆಸಿದವರ ಮನೆಗೆ ಗ್ಯಾಸ್ ಹೋಯಿತೇ? ಎಂದೆಲ್ಲ ಪ್ರಶ್ನೆಗಳ ಸುರಿಮಳೆಗೈದರು.

ನ.ಪಂ. ಮಾಜಿ ಸದಸ್ಯ ಹಾಗೂ ಪರಿಸರ ನಿವಾಸಿ ಕೆ.ಗೋಕುಲ್ ದಾಸ್ ಮಾತನಾಡಿ, ಪರಿಸರದ ಜನರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬರ್ನಿಂಗ್ ಮೆಷಿನ್ ಅಳವಡಿಸಿ, ಉದ್ಘಾಟನೆಯನ್ನೂ ಮಾಡಲಾಯಿತು. ಈಗ ಆ ಸಂದರ್ಭ ಅಧ್ಯಕ್ಷರಾಗಿದ್ದವರೇ ಅದು ಸರಿ ಇಲ್ಲ. ಅಧಿಕಾರಿಗಳು ಕೆಲಸ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ವಿನಯರ ಮಾತು ಕೇಳುತ್ತಿದ್ದರೆ ಅವರಿಗೆ ಕಲ್ಚೆರ್ಪೆ ಪ್ರದೇಶ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ ಎಂದು ನಮಗನಿಸುತ್ತಿದೆ. ಅವರು ಕಲ್ಚೆರ್ಪೆ ನಿವಾಸಿಗಳ ಆರೋಗ್ಯದ ಕಡೆ ಒಮ್ಮೆ ನೋಡಲಿ. ಆದ್ದರಿಂದ ಪರಿಸರದ ಜನರ ಜೀವ ರಕ್ಷಿಸಬೇಕು, ಸಾಂಕ್ರಾಮಿಕ ರೋಗ ತಡೆಯಬೇಕು ಹಾಗೂ ಶುದ್ಧ ಕುಡಿಯುವ ನೀರು ಸಿಗಬೇಕೆಂಬ ಬೇಡಿಕೆ ಇಟ್ಟುಕೊಂಡು ಸೆ.೧೫ರಂದು ಕಪ್ಪು ಪಟ್ಟಿ ಧರಿಸಿ ಮಾನವ ಸರಪಳಿಯಲ್ಲಿ ನಾವು ಭಾಗವಹಿಸುತ್ತೇವೆ” ಎಂದು ಅವರು ಹೇಳಿದರು.


ಕಲ್ಚೆರ್ಪೆಗೆ ನಗರದ ಪಂಚಾಯತ್‌ನ ಎಲ್ಲ ಸದಸ್ಯರನ್ನು ಗ್ರಾಮ ವಾಸ್ತವ್ಯಕ್ಕೆ ಆಹ್ವಾನಿಸುತ್ತೇವೆ. ಅವರು ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಅಲ್ಲಿರಬೇಕು. ಅವರಿಗೆ ಊಟದ ವ್ಯವಸ್ಥೆಯನ್ನು ಅದೇ ಸ್ಥಳದಲ್ಲಿ ನಾವು ವ್ಯವಸ್ಥೆ ಮಾಡುತ್ತೇವೆ. ಬಾರದ ಸದಸ್ಯರಿಗೆ ಅವರ ಹೆಸರಿನಲ್ಲೆ ಎಲೆ ಹಾಕಿ ಬಡಿಸುತ್ತೇವೆ ಅವರಿಗೆ ನಮ್ಮ ಸಮಸ್ಯೆ ಅರಿವಾಗಬೇಕು. ನಗರದ ಕಸದಿಂದ ಮುಕ್ತಿ ಸಿಗಬೇಕು ಎಂದು ಗೋಕುಲ್ ದಾಸ್ ಹೇಳಿದರು.

ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಲ್ಚೆರ್ಪೆ ಮಾತನಾಡಿ, ಪ್ರತೀ ಬಾರಿಯೂ ಕಸ ಬಂದಾಗ ಹೋರಾಟ ಮಾಡುತ್ತಿದ್ದೆವು. ಭರವಸೆ ಸಿಗುತ್ತಿತ್ತೇ ಹೊರತು ಆಡಳಿತದವರು ಹೇಳಿದ ಮಾಥಿನಂತೆ ನಡೆದುಕೊಳ್ಳಲಿಲ್ಲ. ಆದ್ದರಿಂದ ಈ ಬಾರಿ ಶತಾಯಗತಾಯ ನಾವಂತೂ ಕಸ ಬರಲು ಬಿಡುವುದಿಲ್ಲ” ಎಂದು ಹೇಳಿದರು. ಗೌರವಾಧ್ಯಕ್ಷ ಯುಸುಪ್ ಅಂಜಿಕಾರು ಮಾತನಾಡಿ, ೨೦೧೬ರಲ್ಲೇ ಕಲ್ಚೆರ್ಪೆಯಲ್ಲಿ ಕಸ ಹಾಕಬಾರದೆಂದು ಪರಿಸರ ಇಲಾಖೆ ಹೇಳಿದೆ. ಎನ್.ಒ.ಸಿ. ಕೂಡಾ ನೀಡಿಲ್ಲ. ಆದರೂ ಇವರು ಕಸ ಹಾಕುತ್ತಾರೆಂದಾದರೆ ನಿಯಮ ಉಲ್ಲಂಘನೆಯಲ್ಲವೇ?” ಎಂದು ಪ್ರಶ್ನಿಸಿದರು.

ಹೋರಾಟ ಸಮಿತಿ ಉಪಾಧ್ಯಕ್ಷ ನಾರಾಯಣ ಜಬಳೆ ಮಾತನಾಡಿ, ಕಲ್ಚೆರ್ಪೆಗೆ ಕಸ ಬರುವಂತೆ ಮಾಡಿದವರು ಎನ್.ಎ. ರಾಮಚಂದ್ರರು. ನಾಯಕರಾದವರು ಜನರ ಪರ ಇರಬೇಕೇ ಹೊರತು ಧ್ವೇಷ ರಾಜಕಾರಣ ಯಾವತ್ತೂ ಮಾಡಬಾರದು ಎಂದು ಹೇಳಿದರು.