ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜ ಸೇರಿದಂತೆ ಹಲವು ಗಣ್ಯರು ಭಾಗಿ
ಹಿಮಾಯತುಲ್ ಇಸ್ಲಾಂ ಜಮಾಅತ್ ಸಮಿತಿ ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ವತಿಯಿಂದ ವಿಶ್ವ ಪ್ರವಾದಿ ಮುಹಮ್ಮದ್ (ಸ) ರವರ ಜನ್ಮದಿನಾಚರಣೆ ಈದ್ ಮಿಲಾದ್ ಅಂಗವಾಗಿ ಸರ್ವಧರ್ಮೀಯರ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸೆಪ್ಟಂಬರ್ 16 ರಂದು ಗೂನಡ್ಕದ ಮಸೀದಿಯ ವಠಾರದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಮಾಜಿ ಅರಣ್ಯ ಸಚಿವರಾದ ಬಿ.ರಮಾನಾಥ ರೈ ಅವರು ” ಇಂತಹ ಸರ್ವಧರ್ಮ ಸಮ್ಮೇಳನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಉಳಿಸಲು ನೆರವಾಗುತ್ತದೆ. ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿಯ ವತಿಯಿಂದ ಪ್ರತೀ ವರ್ಷ ನಡೆಸಲ್ಪಡುವ ಸರ್ವಧರ್ಮೀಯರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮ ” ಎಂದು ಶ್ಲಾಘಿಸಿದರು.
ದ್ವಿತೀಯ ಬಾರಿಗೆ ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಗೊಂಡ ಐವನ್ ಡಿ’ಸೋಜರವರನ್ನು ಈ ಸಂದರ್ಭ ಮಸೀದಿಯ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಐವನ್ ಡಿ’ಸೋಜರವರು ” ನಮ್ಮ ಬಾಲ್ಯದಲ್ಲಿ ಇಂತಹ ಸರ್ವಧರ್ಮ ಸಮ್ಮೇಳನಗಳು ನಡೆಯುತ್ತಿರಲಿಲ್ಲ ಹಾಗೂ ಅದರ ಅವಶ್ಯಕತೆ ಇರಲಿಲ್ಲ, ಈಗ ಇಂತಹ ಕಾರ್ಯಕ್ರಮಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಗೂನಡ್ಕದ ಬದ್ರಿಯಾ ಜುಮಾ ಮಸೀದಿಯವರನ್ನು ನಾನು ಅಭಿನಂದಿಸುತ್ತೇನೆ ” ಎಂದರು.
ಕರ್ನಾಟಕ ಕಟ್ಟಡ ಕಾರ್ಮಿಕರ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ಕೆ.ಪಿ.ಜಾನಿಯವರನ್ನು ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಮಿತ್ತೂರು ಕೆ.ಜಿ.ಎನ್. ದುವಾ ಕಾಲೇಜಿನ ಪ್ರೊಫೆಸರ್ ಬಹು.ಮುಹಮ್ಮದ್ ಹುಸೈನ್ ಅಲ್ ಮುಈನಿ ಮಾರ್ನಾಡ್ ಹಾಗೂ ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಲಕ್ಷ್ಮೀಶ ಗಬ್ಬಲಡ್ಕ ಮುಖ್ಯ ಭಾಷಣ ಮಾಡಿದರು. ಮಸೀದಿಯ ಖತೀಬರಾದ ಬಹು.ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಷದಿಯವರು ಪ್ರಾರ್ಥನೆ ನೆರವೇರಿಸಿದರು. ಕೀಲಾರು ರಾಜಾರಾಂ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ.ಪಿ.ಜಗದೀಶ್ ಕುಯಿಂತೋಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಸುಳ್ಯ ವೆಂಕಟ್ರಮಣ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಪಿ.ಸಿ.ಜಯರಾಮ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ, ಕರ್ನಾಟಕ ಸರ್ಕಾರದ ನಿವೃತ್ತ ಅಧಿಕಾರಿ ಇಬ್ರಾಹಿಂ ಗೂನಡ್ಕ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ಎಸ್.ಪಿ.ಲೋಕನಾಥ್, ಅಧ್ಯಕ್ಷರಾದ ಜಿ.ರಾಮಚಂದ್ರ, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷರಾದ ಯು.ಬಿ.ಚಕ್ರಪಾಣಿ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಕೆ.ಹನೀಫ್, ಸುಳ್ಯ ತಾಲೂಕು ಎ.ಪಿ.ಎಂ.ಸಿ.ಮಾಜಿ ಉಪಾಧ್ಯಕ್ಷರಾದ ಹಾಜಿ ಪಿ.ಎ.ಉಮ್ಮರ್ ಗೂನಡ್ಕ, ಪತ್ರಕರ್ತರಾದ ಹರೀಶ್ ಬಂಟ್ವಾಳ್, ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ರವಿ ಪೂಜಾರಿ, ಪ್ರಮುಖರಾದ ಪಿ.ಎನ್.ಗಣಪತಿ ಭಟ್, ಜಿ.ಜಿ.ನವೀನ್ ಕುಮಾರ್, ವಸಂತ ಪೆಲ್ತಡ್ಕ, ಜ್ಞಾನಶೀಲನ್ ನೆಲ್ಲಿಕುಮೇರಿ, ಉನೈಸ್ ಪೆರಾಜೆ, ಲೂಕಾಸ್ ಟಿ.ಐ.ಈ ಸಂದರ್ಭ ಉಪಸ್ಥಿತರಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮೂಡನಕಜೆ ಚಿದಾನಂದ, ಬಾಲಚಂದ್ರ ನರಂದಗುಳಿ ಅವರನ್ನು ಹಾಗೂ ಮಸೀದಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇಸಾಕ್ ಗೂನಡ್ಕರವರನ್ನು ಈ ವೇಳೆ ಗುರುತಿಸಿ ಅಭಿನಂದಿಸಲಾಯಿತು.
ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿದರು, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಕೆ.ಅಬೂಸಾಲಿ ವಂದಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿದರು.