ಮಾಸ್ ಮಹಾಸಭೆ

0

ಮುಂದಿನ ವರ್ಷಾಂತ್ಯಕ್ಕೆ ಅಡಿಕೆ ಖರೀದಿಯನ್ನು ಡಬ್ಬಲ್ ಮಾಡುವ ಗುರಿ : ಸೀತಾರಾಮ ರೈ ಸವಣೂರು

ಮಾಸ್ ಲಿ. ಮಂಗಳೂರು ಇದರ ವಾರ್ಷಿಕ ಮಹಾಸಭೆ ಸೆ. 21ರಂದು ಮಂಗಳೂರಿನ ಕೇಂದ್ರ ಕಚೇರಿಯ ಆವರಣದಲ್ಲಿ ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ಸೀತಾರಾಮ ರೈಯವರು ಸಂಘದ ಸದಸ್ಯರ ಸಲಹೆಗಳನ್ನು ಸ್ವೀಕರಿಸಿ ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತೇನೆ. ಮುಂದಿನ ಮಾರ್ಚ್ ಅಂತ್ಯಕ್ಕೆ ಅಡಿಕೆ ಖರೀದಿಯನ್ನು ಡಬ್ಬಲ್ ಮಾಡುವ ಗುರಿಯನ್ನು ಸಂಘ ಹೊಂದಿದೆ. ಬೇರೆ ಬೇರೆ ಸಹಕಾರಿ ಸಂಘಗಳಿಂದ ಅಡಿಕೆ ಖರೀದಿ ಕೇಂದ್ರವನ್ನು ತೆರೆಯಲು ಬೇಡಿಕೆ ಬಂದಿದ್ದು, ಮುಂದಿನ ತಿಂಗಳು ನಿಂತಿಕಲ್ಲಿನಲ್ಲಿ, ಬಳಿಕ ಹಂತ ಹಂತವಾಗಿ ಬೇಡಿಕೆಗೆ ಅನುಗುಣವಾಗಿ ಶಾಖೆಗಳನ್ನು ತೆರೆಯುವ ಕಾರ್ಯ ಮಾಡುತ್ತೇವೆ. ಸುಳ್ಯದ ಎಪಿಎಂಸಿ ಕಟ್ಟಡದಲ್ಲಿ ಅಡಿಕೆ ಸಂಸ್ಕರಣಾ ಘಟಕವನ್ನು ತೆರೆದು ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕುಗಳ ಅಡಿಕೆಯನ್ನು ಅಲ್ಲಿಯೇ ಸಂಸ್ಕರಿಸಿ ನೇರವಾಗಿ ಗುಜರಾತಿಗೆ ಮಾರಾಟ ಮಾಡುವ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ.

ಅದೇ ರೀತಿ ಸರಕಾರದಿಂದ ರೂ. 5 ಕೋಟಿ ಪಾಲುಬಂಡವಾಳ ನೀಡಬೇಕೆಂದು ಬೇಡಿಕೆಯನ್ನು ಇಡಲಾಗಿದೆ. ಮಂಗಳೂರು ಕೃಷಿಕರ ಸಹಕಾರಿ ಸಂಘದ ಅಭಿವೃದ್ಧಿಯಲ್ಲಿ ತಾವೆಲ್ಲ ಸಹಕಾರ ನೀಡಬೇಕು ಎಂದರು. ದಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಭಟ್, ನಿರ್ದೇಶಕ ನಿತ್ಯಾನಂದ ಮುಂಡೋಡಿ ಸೇರಿದಂತೆ ಇತರ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜೇಶ್ವರಿ ಮತ್ತು ಪವಿತ್ರಾರವರ ಪ್ರಾರ್ಥನೆಯೊಂದಿಗೆ ಆರಂಭವಾದ ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರದೀಪ್ ಯಡಿಯಾಳ್ ಸ್ವಾಗತಿಸಿ, ನಿರ್ದೇಶಕ ಶಿವಾಜೆ ಎಸ್. ಸುವರ್ಣ ವಂದಿಸಿದರು. ಸಂಘದ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಸಹಕರಿಸಿದರು.