ಪತ್ರಿಕಾ ಗೋಷ್ಠಿಯಲ್ಲಿ ತೀರ್ಥರಾಮ ಪರ್ನೋಜಿ ಉಳುವಾರು ಆರೋಪ
ನಾವು ಉಳುವಾರು ಮನೆತನದ ಹಿರಿಯರಾಗಿ ಊರಿನಲ್ಲಿ ಗುರುತಿಸಿಕೊಂಡವರು. ದೇವರ ಪೂಜೆ ಕಾರ್ಯಕ್ರಮ ದೇವಸ್ಥಾನಗಳಲ್ಲಿ ಯಾವ ರೀತಿ ನಡೆಯುತ್ತದೆಯೋ ಅದೇ ರೀತಿ ನಮ್ಮ ಮನೆಯಲ್ಲಿಯೂ ದಶಕಗಳಿಂದ ನಡೆಸುತ್ತಾ ಬರುತ್ತಿದ್ದೇವೆ. ಅಲ್ಲದೇ ಆಚಾರ, ವಿಚಾರ, ಸಂಪ್ರದಾಯಗಳನ್ನು ಪಾಲಿಸಿಕ್ಕೊಂಡು ಬಂದಿದ್ದೇವೆ.
ಅಂಥಹ ನಮಗೆ ನಮ್ಮೂರಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಸದಸ್ಯತನವನ್ನು ಕೊಡದೆ, ಒಂದು ಕಾಲದಲ್ಲಿ ನಾನೇ ಕೈ ಹಿಡಿದು ಕರೆದುಕೊಂಡು ಹೋಗಿ ಆಡಳಿತ ಸಮಿತಿಗೆ ಕೂರಿಸಿರುವ ಸದಸ್ಯರಿಗೆ ಅವರ ರಾಜಕೀಯ ಕುತಂತ್ರಕ್ಕೆ ಮಣಿದು ಇಂದು ಸದಸ್ಯತ್ವಕ್ಕೆ ಶಿಫಾರಸ್ಸು ಮಾಡಿರುವುದು ಸರಿಯಲ್ಲ ಮತ್ತು ಅವರ ಆಯ್ಕೆಯನ್ನು ನಾವು ಖಂಡಿಸುತ್ತೇವೆ ಎಂದು ತೀರ್ಥರಾಮ ಪರ್ನೋಜಿ ಉಳುವಾರು ರವರು ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಮೊದಲಿನ ಕಾಲದಲ್ಲಿ ನಮ್ಮ ಹಿರಿಯರು ದೇವಾಲಯದ ಆಡಳಿತ ಸಮಿತಿ ರಚನೆಯನ್ನು ಮಾಡುವಾಗ ಸ್ಥಳೀಯ ಊರುಗಳಾದ ಆಲೆಟ್ಟಿ, ಸಂಪಾಜೆ, ನಾರ್ಕೋಡು, ಅರಂತೋಡು ಈ ಎಲ್ಲಾ ಭಾಗದಿಂದ ಮುಖಂಡರನ್ನು ಕರೆಸಿ ಚರ್ಚೆ ನಡೆಸಿ ಸಮಿತಿಗೆ ಸದಸ್ಯರ ಆಯ್ಕೆ ಮಾಡಲಾಗುತ್ತಿತ್ತು.ಆದರೆ ಈಗ ರಾಜಕೀಯ ಪ್ರವೇಶಮಾಡಿ ರಾಜ್ಯದಲ್ಲಿ ಅಧಿಕಾರ ಮಾಡುವ ಪಕ್ಷದ ಸದಸ್ಯರುಗಳಿಗೆ ಅವಕಾಶ ನೀಡುವ ಪದ್ಧತಿ ಬಂದಿದೆ. ನಾನು ಅಧಿಕಾರಕ್ಕಾಗಿ ಈ ಮಾತನ್ನು ಇಂದು ಹೇಳುತ್ತಿಲ್ಲ. ಆದರೆ ನಾನು ಸದಸ್ಯತ್ವಕ್ಕೆ ಅರ್ಜಿ ನೀಡಿ ವಿನಂತಿಸಿಕೊಂಡ ಬಳಿಕವೂ ಅದನ್ನು ಪರಿಗಣಿಸದೆ ಯಾವುದೇ ಅರ್ಜಿಯನ್ನು ಹಾಕದೆ ತಮ್ಮ ರಾಜಕೀಯ ಕುತಂತ್ರದಿಂದ ಸದಸ್ಯತ್ವವನ್ನು ಗಿಟ್ಟಿಸಿಕ್ಕೊಂಡಿರುವ ಯು. ಕೆ . ಕೇಶವ ಗೌಡ ಇವರ ಬಗ್ಗೆ ಜನರು ತಿಳಿಯ ಬೇಕು. ಅಲ್ಲದೆ ಹಿಂದೂಗಳ ದೇವಸ್ಥಾನದ ಸದಸ್ಯರ ಆಯ್ಕೆಗೆ ಇತರ ಧರ್ಮದವರ ಜೊತೆ ಸೇರಿ ನನ್ನ ಅರ್ಜಿಯನ್ನು ಪಡೆಯದಂತೆ ಮಾಡಿರುವ ಅವರ ಮನಸ್ಥಿತಿಯ ಬಗ್ಗೆ ಜನರು ತಿಳಿಯಬೇಕು ಎಂದು ಹೇಳಿದರು.
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯತ್ವಕ್ಕಾಗಿ ಎಲ್ಲಾ ಅರ್ಹತೆಯನ್ನು ಪಡೆದಿರುವ ನಾನು 2023 ನವಂಬರ್ 27 ರಂದು ಅರ್ಜಿಯನ್ನು ಸಲ್ಲಿಸಿದ್ದು, ಆದರೆ ನನ್ನ ಅರ್ಜಿಯನ್ನು ಪರಿಗಣಿಸದೆ ಅರ್ಜಿಯನ್ನೇ ಹಾಕದ ಯು.ಕೆ.ಕೇಶವ ಎಂಬುವವರನ್ನು ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ ಮಾಡಲು ಶಿಫಾರಸ್ಸು ಮಾಡಿದ್ದು ಇದರಿಂದ ನನಗೆ ತೀವ್ರ ರೀತಿಯಲ್ಲಿ ಅನ್ಯಾಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ನಿವಾಸಿಗಳಾದ ಜನಾರ್ಧನ ಅಡ್ಕಬಳೆ, ಗುರುಪ್ರಸಾದ್ ನಾರ್ಕೋಡು, ಯತೀಶ್ ಎ ಆರ್, ರಾಮಕೃಷ್ಣ ಕುಂಟಿಕಾನಾ, ತೀರ್ಥರಾಮ ಬಾಳೆಕಜೆ ಉಪಸ್ಥಿತರಿದ್ದರು.