ಮರ್ಕಂಜ : ಕಾಣೆಯಾದ ಮಿತ್ತಡ್ಕದ ಮಹಿಳೆಯ ಮನೆಗೆ ತಹಶೀಲ್ದಾರ್ ಭೇಟಿ

0

ಮರ್ಕಂಜದ ಮಿತ್ತಡ್ಕದ ಮೋಹನ ಎಂಬವರ ಪತ್ನಿ ಶೋಭಲತಾ ಎಂಬವರು ಸೆ.24ರ ಮಧ್ಯಾಹ್ನ 3 ಗಂಟೆಯ ವೇಳೆಗೆ ಮನೆಯಿಂದ‌ ಕಾಣೆಯಾಗಿದ್ದರು. ಸ್ಥಳೀಯರು ಹಾಗೂ ಸಂಘಸಂಸ್ಥೆಗಳ ನೆರವಿನೊಂದಿಗೆ ಹುಡುಕಾಟ ನಡೆಸಲಾಗಿತ್ತು.

ಆದರೂ ಪತ್ತೆಯಾಗಿರಲಿಲ್ಲ.‌ ಮನೆಯ ಬಳಿಯ ಬಾವಿಯಲ್ಲಿಯೂ ಹುಡುಕಾಟ ನಡೆಸಿದ್ದರು.

ಆದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಹಾಗಿದ್ದರೂ ನಾಪತ್ತೆಯಾದ ಶೋಭಲತಾರವರು ಬೇರೆಲ್ಲಿಯೂ ಪತ್ತೆಯಾಗದ ಕಾರಣ ಪೋಲೀಸರ ಸೂಚನೆಯಂತೆ ಇಂದು ಬೆಳಗ್ಗಿನಿಂದ ಮನೆಯ ಬಾವಿಯಲ್ಲಿ ಹುಡುಕುವ ಪ್ರಕ್ರಿಯೆ ಆರಂಭಿಸಲಾಯಿತು. ಮೊದಲಿಗೆ ಬಾವಿಯ‌ ನೀರು ಖಾಲಿ‌ ಮಾಡಲಾಯಿತು. ನೀರು ಖಾಲಿಯಾಗುತ್ತಿದ್ದಂತೆ ಬಾವಿಯ ಒಳಭಾಗದ ಸುತ್ತಲೂ‌ ಮಣ್ಣು ಕುಸಿಯ ತೊಡಗಿತು.‌ ಹೀಗಾಗಿ ಕಾರ್ಯಾಚರಣೆ ನಿಲ್ಲಿಸಬೇಕಾಯಿತು.

ತಹಶೀಲ್ದಾರ್ ಆಗಮನ :
ಕುಸಿದ ಬಾವಿಯ ಮಣ್ಣನ್ನು ತೆಗೆಯಲು ಹಿಟಾಚಿ ಯಂತ್ರದ ಬಳಕೆ ಅನಿವಾರ್ಯವಾಗಿತ್ತು.‌ ಆದರೆ ಕಾಣೆಯಾದ ಬಗ್ಗೆ ದೂರು ದಾಖಲಾಗಿರುವ ಕಾರಣ ಮತ್ತು ಬಾವಿಯಲ್ಲಿ ದೇಹ ಇರುವ ಯಾವುದೇ ಕುರುಹು ಇಲ್ಲದ ಕಾರಣ ಸ್ಥಳಕ್ಕೆ ಬಂದಿದ್ದ ಸುಳ್ಯ ಠಾಣೆಯ ಎಸ್.ಐ.ಯವರು‌ ಮುಂದಿನ ಪ್ರಕ್ರಿಯೆಯ ಬಗ್ಗೆ ಸುಳ್ಯ ತಹಶೀಲ್ದಾರ್ ರವರಿಗೆ ಮಾಹಿತಿ ನೀಡಿದರು. ಸುಳ್ಯ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಇಂದು ರಾತ್ರಿಯಾದ ಕಾರಣ ನಾಳೆ ಹಿಟಾಚಿ ಯಂತ್ರದ ಮೂಲಕ‌ ಮಣ್ಣು ತೆಗೆದು ಹುಡುಕುವ ಕಾರ್ಯಾಚರಣೆ ಮಾಡುವ ಎಂದು ಸೂಚಿಸಿದರೆನ್ನಲಾಗಿದೆ. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಹೊಸೊಳಿಕೆ, ಸದಸ್ಯ ಗೋವಿಂದ ಅಳವುಪಾರೆ ಸೇರಿದಂತೆ ಸ್ಥಳೀಯರು ಹಾಗೂ ಪೋಲೀಸ್ ಠಾಣೆಯ ಎಸ್.ಐ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ತವರು ಮನೆಗೆ ಹೋಗಿರುವ ಬಗ್ಗೆ ಊರವರ ಅನುಮಾನ! ಕಾಣೆಯಾದ ಶೋಭಲತಾರವರು ಕೆಲ ಸಮಯದ ಹಿಂದೆ ಮನೆಯವರ ಮೇಲೆ ಅಸಮಾಧಾನಗೊಂಡು‌ ತವರು ಮನೆಗೆ‌ ಹೋಗಿ ದೂರು ದಾಖಲಿಸಿದ್ದರೆನ್ನಲಾಗಿದೆ. ಬಳಿಕ ಪೋಲೀಸ್ ಠಾಣೆಯಲ್ಲಿ ಮಾತುಕತೆ ನಡೆಸಿ‌ ಪತಿಯ ಜೊತೆಗೆ ಕಳುಹಿಸಲಾಗಿತ್ತು.

ಇದೀಗ ಮತ್ತೆ ಶೋಭಲತಾರವರು ಮಂಡೆಕೋಲಿನ ತವರು ಮನೆಯ ಕಡೆ ಹೋಗಿರುವ ಸಾಧ್ಯತೆ ಇದೆ ಎಂದು ಊರಿನ‌ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ತವರು ಮನೆಯವರೆಲ್ಲ ಕಾಣೆ ದೂರು ಕೊಡಲು ಸುಳ್ಯ ಪೋಲೀಸ್ ಠಾಣೆಗೆ ಬಂದಿದ್ದರು. ಆದ್ದರಿಂದ ಅವರಲ್ಲಿಗೆ ಹೋಗಿರಲು ಸಾಧ್ಯವಿಲ್ಲವೆಂದು ಹೇಳಲಾಗುತ್ತಿದೆ.