ಕಲ್ಲುಗುಂಡಿಯಲ್ಲಿ ಕರ್ತವ್ಯದಲ್ಲಿದ್ದ ಅಂಚೆ ಇಲಾಖೆಯ ಚೆನ್ನಕೇಶವ ಪಾರೆಪ್ಪಾಡಿ ಸೇವಾ ನಿವೃತ್ತಿ

0

ಸುಮಾರು 42 ವರ್ಷಗಳ ಕಾಲ ಆಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಕಲ್ಲುಗುಂಡಿಯಲ್ಲಿ ಕರ್ತವ್ಯದಲ್ಲಿದ್ದ ಚೆನ್ನಕೇಶವ ಪಾರೆಪ್ಪಾಡಿ ಸೆ. 30 ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ನಾಲ್ಕೂರು ಗ್ರಾಮದ ದಿl ಸುಂದರ ಗೌಡ ಮತ್ತು ದಿl ಬಾಲಕಿ ದಂಪತಿಗಳ ಪುತ್ರರಾಗಿರುವ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಮೆಟ್ಟಿನಡ್ಕ ಕಿ.ಪ್ರಾ ಶಾಲೆಯಲ್ಲಿ ಹಾಗೂ ಬೊಬ್ಬೆಕೇರಿ ಶಾಲೆಯಲ್ಲಿ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಗುತ್ತಿಗಾರು ಪ.ಪೂ ಕಾಲೇಜಿನಲ್ಲಿ ಪಡೆದಿದ್ದು, ಬಿ.ಎ ಪದವಿಯನ್ನು ದೂರ ಶಿಕ್ಷಣ ಮುಖಾಂತರ ಪಡೆದರು. 1983 ರಲ್ಲಿ ಗುತ್ತಿಗಾರಿನಲ್ಲಿ ಅಂಚೆ ಇಲಾಖೆಗೆ ಸೇರಿದ ಇವರು ಕೆಲ ವರ್ಷಗಳ ಬಳಿಕ ಅರಂತೋಡಿಗೆ ಸಬ್ ಪೋಸ್ಟ್ ಮಾಸ್ಟರ್ ಆಗಿ ನಿಯುಕ್ತಿಗೊಂಡರು. ಬಳಿಕ ಸುಳ್ಯ, ದೊಡ್ಡತೋಟ, ಗುತ್ತಿಗಾರು, ನೆಟ್ಟಣದಲ್ಲಿ ಕರ್ತವ್ಯ ನೆರವೇರಿಸಿ ಸುಬ್ರಹ್ಮಣ್ಯದಲ್ಲಿದ್ದಾಗ ಲೋವರ್ ಸ್ಕೇಲ್ ಗ್ರೇಡ್ ಸಬ್ ಪೋಸ್ಟ್ ಮಾಸ್ಟರ್ ಆಗಿ ಭಡ್ತಿಗೊಂಡರು. ಆ ಬಳಿಕ ಗುತ್ತಿಗಾರಿನಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಕಲ್ಲುಗುಂಡಿಯಲ್ಲಿ ಅಂಚೆ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದರು. ತಮ್ಮ ಸೇವಾ ಅವಧಿಯಲ್ಲಿ ಭಾರತೀಯ ಅಂಚೆ ಇಲಾಖೆ ಕೊಡ ಮಾಡುವ RPLI/PLI ಪ್ರಶಸ್ತಿಗಳನ್ನು 7 ಬಾರಿ ಪಡೆದಿರುತ್ತಾರೆ. 2012-13 ಆರ್ಥಿಕ ವರ್ಷದಲ್ಲಿ ನೆಟ್ಟಣ ಅಂಚೆ ಕಚೇರಿಯ ಸೇವೆಯ ಸಂದರ್ಭ ಬೆಂಗಳೂರು G.P.O ನ “AWARD FUNCTION “ನಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಇವರ ಪತ್ನಿ ಶ್ರೀಮತಿ ಯಶೋದಾ ಎಸ್ ಕೆ, ಗೃಹಣಿಯಾಗಿದ್ದಾರೆ. ಮಗ ಡಾl ದೇಶಿತ್. ಪಿ ಚಿತ್ರದುರ್ಗದ ಅಮೃತ ಆರ್ಯುವೇದ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೋಫೆಸರ್ ಆಗಿದ್ದು ಬೆಂಗಳೂರಿನಲ್ಲಿ ಆಯುರ್ ಸ್ಫೂರ್ತಿ ಆಯುರ್ವೈದ್ಯಾಲಯ ಹಾಗೂ ತಮ್ಮದೇ ಕ್ಲಿನಿಕ್ ನನ್ನು ನಡೆಸುತಿದ್ದಾರೆ. ಮತ್ತೋರ್ವ ಮಗ ನಿಶಿತ್ .ಪಿ ಬೆಂಗಳೂರು ಜೆ..ಪಿ ನಗರದಲ್ಲಿರುವ ಅಂಚೆ ಇಲಾಖೆಯ ಮುಖ್ಯ ಕಛೇರಿಯಯಲ್ಲಿ ಉದ್ಯೋಗದಲ್ಲಿದ್ದಾರೆ. ಇನ್ನೊಬ್ಬ ಮಗ ವಿನೀತ್. ಪಿ ಸಿಂಗಾಪುರ ಸರಕಾರದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಚೆನ್ನ ಕೇಶವ ಅವರು ಪ್ರಸ್ತುತ ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ.