ಇದು ನನ್ನ ಅಪ್ಪನ ದೇಹಾಂತವಾಗುವ ಕೆಲವು ದಿನಗಳ ಮೊದಲು ನಾನೇ ತೆಗೆದ ಛಾಯಾಚಿತ್ರ … ಹಲವು ದಿನಗಳಿಂದ ಹಾಸಿಗೆ ಹಿಡಿದು ಅನ್ನಾಹಾರದ ಸೇವನೆ ಇಲ್ಲದೆ ಇಹ ಲೋಕದ ಪರಿವೆಯೇ ಇಲ್ಲದೇ ಮಲಗಿದ್ದ ನಮ್ಮಪ್ಪನನ್ನು ನಾನು ಸ್ಪರ್ಶಿಸಿದಾಗ ಕಣ್ಣು ರೆಪ್ಪೆ ಬಿಚ್ಚದೇ ನನ್ನ ಸ್ಪರ್ಶದಿಂದಲೇ ಗುರುತಿಸಿ ಎಂಜಲು ನುಂಗಿ ನನ್ನ ಅಸ್ಥಿತ್ವವನ್ನು ದ್ರಡೀಕರಿಸಿದ ಅಪೂರ್ವ ಕ್ಷಣ ಮತ್ತು ನಾನು ಅಪ್ಪನ ಆತ್ಮೀಯತೆಯನ್ನು ಕಡೆ ಬಾರಿ ಆಸ್ವಾದಿಸಿ ಆನಂದಿಸಿದ ಅಮ್ರತ ಘಳಿಗೆ.
ನಾನು ಚಿಕ್ಕವನಿದ್ದಾಗ ಎಡವಿ ಬಿದ್ದಾಗ ಎತ್ತಿ ಆಡಿಸಿದ ರಮಿಸಿದ ಕೈಗಳು ಇದೇ ಆಗಿತ್ತು
ನಾನು ತಪ್ಪು ಮಾಡಿದಾಗ ಎರಡು ಏಟು ನೀಡಿ ತಿದ್ದಿ ತೀಡಿದ ಕೈಗಳು ಇದೇ ಆಗಿತ್ತು
ನಾನು ಗೆದ್ದು ಬೀಗಿದಾಗ ತಲೆ ಸವರಿ ನನ್ನೊಂದಿಗೆ ಸಂಭ್ರಮಿಸಿದ ಕೈಗಳು ಇದೇ ಆಗಿತ್ತು.
ನಾನು ಸೋತು ಸುಣ್ಣವಾಗಿ ತಲೆ ತಗ್ಗಿಸಿ ಮನೋಸ್ಥೈರ್ಯ ಕಳೆದು ಕೊಂಡು ಕುಗ್ಗಿ ಕಂಗಾಲಾದಾಗ ಬೆನ್ನು ಸವರಿ ಸಂತೈಸಿದ ಕೈ ಗಳು ಇದೇ ಆಗಿತ್ತು.
ಹೀಗೆ ಸೋತಾಗ ಗೆದ್ದಾಗ ಬಿದ್ದಾಗ ಎದ್ದಾಗ ಸದಾ ಕಾಲ ನನ್ನನ್ನು ಆಧರಿಸಿದ ಈ ಸುಕ್ಕುಗಟ್ಟಿದ ಕೈಗಳೇ ನನ್ನ ಬಹು ದೊಡ್ಡ ಆಸ್ತಿ ಯಾಗಿತ್ತು. ೮೧ ವರುಷಗಳ ತುಂಬು ಜೀವನ ನಡೆಸಿ ನಮ್ಮನ್ನು ಸಂಸಾರ ಸಾಗರದ ದಡ ಸೇರಿಸಿ ಹರಿ ಪಾದ ಸೇರಿ ಇಂದಿಗೆ ಎರಡು ವರ್ಷ ಕಳೆದರೂ ಅವರ ನೆನಪು ನನ್ನ ಮನಃಪಟಲದಲ್ಲಿ ಅಜರಾಮರವಾಗಿ ಇವತ್ತಿಗೂ ಇದೆ….. ಅಪ್ಪಯ್ಯ ನಿಮ್ಮ ನೆನಪೇ ಮಧುರ .. ಸುಮಧುರ.. ನಿಮ್ಮ ಆಶೀರ್ವಾದ ನಮಗೆ ಸದಾ ಶ್ರೀರಕ್ಷೆ ಯಾಗಿ ಕಾಪಾಡಲಿ ಎಂದು ಕಾಣದ ದೇವರಲ್ಲಿ ವಿನೀತನಾಗಿ ಬೇಡಿಕೊಳ್ಳುತ್ತೇನೆ… ಮುಂದಿನ ಏಳೇಳು ಜನ್ಮದಲ್ಲೂ ನಿಮ್ಮ ಮಗನಾಗಿ ಹುಟ್ಟುವ ಭಾಗ್ಯ ನನಗೆ ಸಿಗಲಿ ಮತ್ತು ನಿಮ್ಮ ಋಣ ವನ್ನು ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ… ಹೋಗಿ ಬನ್ನಿ ಅಪ್ಪಯ್ಯ….ಮಗದೊಮ್ಮೆ ಹುಟ್ಟಿ ಬನ್ನಿ ಅಪ್ಪಯ್ಯ.