ಉನ್ನತ ಶಿಕ್ಷಣ ಪಡೆದು ಕೃಷಿಕರಾಗಿರುವ ಶಿವಾನಂದ ಕುಕ್ಕುಂಬಳರಿಂದ ಉರಗ ಸಂರಕ್ಷಣೆ ಕುರಿತು ಉಪನ್ಯಾಸ

0

ಉನ್ನತ ಶಿಕ್ಷಣ ಪಡೆದು ಕೃಷಿಕರಾಗಿರುವ ಅರಂತೋಡು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳರವರು ಹಾವು ಹಿಡಿಯುವುದರ ಜತೆಗೆ ಹಾವುಗಳ ಗುಣಲಕ್ಷಣಗಳ ಬಗ್ಗೆ ಮಾಹಿತಿ ಕೊಡುವುದರಲ್ಲೂ ಎತ್ತಿದ ಕೈ ಎಂದು ತೋರಿಸಿಕೊಟ್ಟಿದ್ದಾರೆ.

ಸುಳ್ಯದ ಪಯಸ್ವಿನಿ ಜೇಸೀಸ್ ಸೀನಿಯರ್ ಲೀಜನ್ ವತಿಯಿಂದ ಅ.29 ರಂದು ಶ್ರೀರಾಂಪೇಟೆಯ ಕಾನತ್ತಿಲ ಕಾಂಪ್ಲೆಕ್ಸ್ ನಲ್ಲಿ ನಡೆದ ಸಭೆಯಲ್ಲಿ ಶಿವಾನಂದ ಕುಕ್ಕುಂಬಳರಿಂದ ಉರಗ ಸಂರಕ್ಷಣೆ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು. ಯಾವ ಹಾವುಗಳು ಕಚ್ಚುತ್ತವೆ ಮತ್ತು ಯಾಕೆ ಕಚ್ಚುತ್ತವೆ , ಯಾವ ಹಾವಿಗೆ ಎಷ್ಟು ಪ್ರಮಾಣದ ವಿಷ ಇರುತ್ತದೆ , ಯಾವುದು ಅಪಾಯಕಾರಿ ಯಾವುದು ಅಲ್ಲ , ಹಾವಿನ ದ್ವೇಷ ಹನ್ನೆರಡು ವರುಷ ಎಂಬೆಲ್ಲ ನಂಬಿಕೆಗಳು ಎಷ್ಡು ಸುಳ್ಳು ಎಂಬ ಮಾಹಿತಿಗಳನ್ನೆಲ್ಲ ಅವರು ಹಂಚಿಕೊಂಡರು. ತಮ್ಮ ಉಪನ್ಯಾಸದ ಬಳಿಕ ಸಭಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿ ಸಂಶಯ ನಿವಾರಿಸಿದರು.

ಸಭೆಯ ಅಧ್ಯಕ್ಷತೆಯನ್ನು ಸೀನಿಯರ್ ಲೀಜನ್ ಅಧ್ಯಕ್ಷ ಚಂದ್ರಶೇಖರ ನಂಜೆ ವಹಿಸಿದ್ದರು. ಕಾರ್ಯದರ್ಶಿ ಎ.ಕೆ. ಮೋಹನ್, ಪಯಸ್ವಿನಿ ಜೇಸೀ ಅಧ್ಯಕ್ಷ ಗುರುಪ್ರಸಾದ್ ನಾಯಕ್ ಉಪಸ್ಥಿತರಿದ್ದರು.

ಸಭೆಯಲ್ಲಿ ಇತ್ತೀಚೆಗೆ ರುಪ್ಸಾ ವತಿಯಿಂದ ಉತ್ತಮ ಶೈಕ್ಷಣಿಕ ಆಡಳಿತಗಾರ ಎಂಬ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ರನ್ನು ಸನ್ಮಾನಿಸಿ ಸತ್ಕರಿಸಲಾಯಿತು. ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಶುಭಹಾರೈಸಿದರು.


ಸೀನಿಯರ್ ಲೀಜನ್ ಸದಸ್ಯರಾದ ಸುಳ್ಯದ ಮಾಜಿ ನ.ಪಂ.ಅಧ್ಯಕ್ಷ ಎಸ್.ಸಂಶುದ್ದೀನ್ ಹಾಗೂ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಕಾರ್ಯಕ್ರಮದ ಭೋಜನದ ಪ್ರಾಯೋಜಕರಾಗಿದ್ದರು. ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕೆ.ಆರ್.ಗಂಗಾಧರ್ ಉಪಸ್ಥಿತರಿದ್ದರು.