ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಚೆಯ್ಯಂಡಾಣೆಯ ಅಯ್ಯಪ್ಪ ಯುವಕ ಸಂಘ ನರಿಯಂದಡ ಇದರ ಸಹಯೋಗದೊಂದಿಗೆ ಇದೇ ನವೆಂಬರ್ 10ರಂದು ನಡೆಸಲುದ್ದೇಶಿಸಿರುವ ಅರೆಭಾಷೆ ಗಡಿನಾಡ ಉತ್ಸವ – 2024ರ ಆಮಂತ್ರಣ ಪತ್ರಿಕೆಯನ್ನು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಎಸ್.ಪೊನ್ನಣ್ಣ ಅವರು ಗುರುವಾರದಂದು ಮಡಿಕೇರಿಯಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಹೆಚ್ಚವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ, ರಿಜಿಸ್ಟ್ರಾರ್ ಶ್ರೀ ಚಿನ್ನಸ್ವಾಮಿ, ಕೊಡು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸೂರ್ತಲೆ ಸೋಮಣ್ಣ, ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷರಾದ ಶ್ರೀ ದಿನೇಶ್ ಎಂ.ಜೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪೂರ್ವಾಧ್ಯಕ್ಷರುಗಳಾದ ಶ್ರೀ ಕೊಲ್ಯದ ಗಿರೀಶ್ ಹಾಗೂ ಶ್ರೀ ಲಕ್ಷ್ಮೀನಾರಯಣ ಕಜೆಗದ್ದೆ, ಚೆಯ್ಯಂಡಾಣೆ ಅರೆಭಾಷೆ ಗಡಿನಾಡ ಉತ್ಸವದ ಸದಸ್ಯ ಸಂಚಾಲಕರಾದ ಶ್ರೀ ವಿನೋದ್ ಮೂಡಗದ್ದೆ, ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು, ಡಾ| ಜ್ಞಾನೇಶ್ ಎನ್, ತೇಜಕುಮಾರ್ ಕುಡೆಕಲ್ಲು, ಲತಾಪ್ರಸಾದ್ ಕುದ್ಪಾಜೆ, ಲೋಕೇಶ್ ಊರುಬೈಲು, ಸಂದೀಪ್ ಪೂಳಕಂಡ, ಮೋಹನ್ ಪೊನ್ನಚನ, ಕುದುಪಜೆ ಕೆ. ಪ್ರಕಾಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಡಿಕೇರಿ ಶಾಸಕರಾದ ಡಾ| ಮಂತರ್ ಗೌಡ ಅವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿ ಗಡಿನಾಡ ಉತ್ಸವಕ್ಕೆ ಆಮಂತ್ರಿಸಲಾಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ದಕ್ಷಿಣ ಕನ್ನಡ ಹಾಗೂ ಕೊಡಗಿನ ಆರು ಗಡಿಭಾಗಗಳಲ್ಲಿ ಗಡಿನಾಡ ಉತ್ಸವವನ್ನು ಹಮ್ಮಿಕೊಂಡಿದ್ದು ಚೆಯ್ಯಂಡಾಣೆಯಲ್ಲಿ ನಡೆಸುತ್ತಿರುವ ಎರಡನೇ ಉತ್ಸವ ಇದಾಗಿರುತ್ತದೆ. ಮೊದಲ ಉತ್ಸವವನ್ನು ಕೇರಳ ಗಡಿ ಪ್ರದೇಶವಾದ ಬಂದಡ್ಕದಲ್ಲಿ ಅಕ್ಟೋಬರ್ 27ರಂದು ಅದ್ಧೂರಿಯಾಗಿ ನಡೆಸಿದ್ದು ಇದೊಂದು ಯಶಸ್ವೀ ಕಾರ್ಯಕ್ರಮವಾಗಿತ್ತು.
ಅಕಾಡೆಮಿಯು ದಶವರ್ಷ ಸಂಭ್ರಮದ ಸವಿನೆನಪಿಗಾಗಿ ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗಗಳಲ್ಲಿ ಅರೆಭಾಷಿಕರಿರುವಲ್ಲಿ ಬಾಂಧವ್ಯ ಹೆಚ್ಚಿಸುವ, ಅಲ್ಲಿನ ಅರೆಭಾಷಿಕರ ಅನಾಥಪ್ರಜ್ಞೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮತ್ತು ಅರೆಭಾಷೆಯನ್ನು ಬೆಳಸಿ ಹಬ್ಬಿಸುವ ಪ್ರಯತ್ನವಾಗಿ ಸರಣಿ ಗಡಿನಾಡ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ ಒಂದರಂದು ಮಂಡೆಕೋಲಿನಲ್ಲಿ ಉತ್ಸವ ನಡೆಯಲಿದೆ. ಹಾಗೆಯೇ ಭಾಗಮಂಡಲ, ಕಲ್ಲಪ್ಪಳ್ಳಿ ಹಾಗೂ ಕುಶಾಲನಗರದಲ್ಲಿ ಮುಂದಿನ ದಿನಗಳಲ್ಲಿ ಅರೆಭಾಷೆ ಗಡಿನಾಡ ಉತ್ಸವ ನಡೆಯಲಿದೆ.