ಜನಪ್ರತಿನಿಧಿಗಳು, ಅಧಿಕಾರಿಗಳು ಜಿಲ್ಲಾಡಳಿತದ ಗಮನ ಸೆಳೆಯಲು ಸಿ.ಪೇರಾಲು ಸಲಹೆ
ಪ್ರಶಸ್ತಿಗೆ 10 ಮಂದಿಗೆ ಶಿಫಾರಸು ನೀಡಿದ್ದೆ. ಈ ಬಗ್ಗೆ ಮಾತನಾಡುತ್ತೇನೆ : ಶಾಸಕಿ ಭಾಗೀರಥಿ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದ.ಕ. ಜಿಲ್ಲಾಡಳಿತದ ವತಿಯಿಂದ ಕೊಡಮಾಡುವ ಪ್ರಶಸ್ತಿಗೆ ಸುಳ್ಯವನ್ನು ಕಡೆಗಣಿಸಿರುವುದಕ್ಕೆ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕು ಕನ್ನಡ ರಾಜ್ಯೋತ್ಸವ ಸಮಾರಂಭ ವೇದಿಕೆಯಲ್ಲಿ ಅತಿಥಿಯಾಗಿದ್ದ ಅವರು ಮಾತನಾಡಿ, ನಿನ್ನೆ ಘೋಷಣೆಯಾದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಸುಳ್ಯದ ಒಬ್ಬರನ್ನು ಪರಿಗಣಿಸದಿರುವುದು ಬೇಸರ ತರಿಸಿದೆ. ಇಂದು ಬೆಳಗ್ಗೆ ಸುಳ್ಯದಿಂದ ಒಬ್ಬರನ್ನು ಆಯ್ಕೆ ಮಾಡಿದ್ದಾರೆ.
ಇದು ಆಗಬಾರದು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕುರಿತು ಜಿಲ್ಲೆಯ ಗಮನ ಸೆಳೆಯಬೇಕು. ಮುಂದಿನ ವರ್ಷ ಸುಳ್ಯಕ್ಕೆ ಕನಿಷ್ಠ 3 ಪ್ರಶಸ್ತಿ ಯನ್ನಾದರೂ ನೀಡಬೇಕು. ಆಯ್ಕೆ ಸಂದರ್ಭದಲ್ಲಿ ನಮಗೆ ಪ್ರಾಧಾನ್ಯ ನೀಡುತಿಲ್ಲ. ಒಂದು ವೇಳೆ ನಮ್ಮನ್ನು ಕೇಳಿದರೆ ನಾವು ಸಾಧಕರ ಪಟ್ಟಿ ನೀಡುತ್ತೇವೆ” ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣದಲ್ಲಿ ಈ ಕುರಿತು ಉಲ್ಲೇಖಿಸಿದ ಶಾಸಕಿ ಭಾಗೀರಥಿ ಮುರುಳ್ಯರವರು, “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾನು 10 ಮಂದಿಗೆ ಶಿಫಾರಸು ಪತ್ರ ನೀಡಿದ್ದೇನೆ. ಮೊದಲ ಪಟ್ಟಿಯಲ್ಲಿ ಹೆಸರಿರಲಿಲ್ಲ. ಆದರೆ ಇಂದು ಗೋಕುಲ್ ದಾಸ್ ಒಬ್ಬರಿಗೆ ನೀಡಿದ್ದಾರೆ. ಅದು ನಮಗೆ ಸಂತೋಷ ನೀಡಿದೆ. ನಮ್ಮಲ್ಲಿ ವಿವಿಧ ಕ್ಷೇತ್ರದ ಸಾಧಕರಿದ್ದಾರೆ. ಮುಂದಿನ ಬಾರೀ ಕನಿಷ್ಟ 5 ಮಂದಿಗಾದರೂ ಪ್ರಶಸ್ತಿ ಸಿಗಬೇಕು ಆ ನಿಟ್ಟಿನಲ್ಲಿ ನಾನು ಮಾತನಾಡುತ್ತೇನೆ” ಎಂದು ಹೇಳಿದರು.
ದೈ.ಶಿ.ಪರಿವೀಕ್ಷಣಾ ಧಿಕಾರಿ ಆಶಾ ನಾಯಕ್ ವಂದಿಸಿದರು.