ಹಚ್ಚಿರುವೆನು ದೀಪ

0

ನಾನಿರುವೆ ಬೆಳಕಿನ ನಾಳೆಗಳ ನಿರೀಕ್ಷೆಯಲಿ,
ಜ್ಞಾನವೆಂಬ ಹಣತೆಯನು ಬೆಳಗುತಲಿ
ಇಂದಿನಂತಿಹ ಮುಂದಿನ ಬದುಕಿಗಾಗಿ..
ನಲುಮೆ ಒಲುಮೆಯ ಗರಿಮೆಯ ನಲಿವಿಗಾಗಿ!
ಇರುಳಿನಲೇ ಬೆಳಕಿಗೆ ಬೆಲೆ,ಚಿಮ್ಮಲಿ ಕಲಿಕೆಯ ಸೆಲೆ
ಹಬ್ಬಲಿ ಜಗದೆಲ್ಲೆಡೆ ಸಾಧನೆಯ ಬಾನುಲಿ..

ಹಚ್ಚಿರುವೆನು ದೀಪ ಮುಗ್ಧ ಹೃದಯದಲಿ,
ಬೆಳಗಿ ದೀವಿಗೆಯನು ಪುಟ್ಟ ಕೈಗಳಲ್ಲಿ
ಮುಂಬರುವ ನಾಳೆಗಳ ಗೆಲುವಿಗಾಗಿ..
ಪುಟ್ಟ ಆಸೆಗಳ ಸಾಕಾರದ ಸಾಕ್ಷಿಗಾಗಿ!
ಕಳೆಯಲಿ ತನುವಿನ ಕೊಳೆ, ಶ್ರಮವಿರಲು ಸುಖದ ನೆಲೆ
ಪ್ರಜ್ವಲಿಸಲಿ ಜ್ಞಾನದ ಜ್ಯೋತಿಯ ಪ್ರಭಾವಳಿ..

ಅಳುವಿಂದಲೇ ನಗುವಿನಲೆಯು
ಕಷ್ಟದಲರಿವು ಜ್ಞಾನದೊಲವು
ಭರವಸೆಗಳ ಆಶಾಕಿರಣವಾಗಿ..
ನಾಳೆಯ ಪೀಳಿಗೆಗೆ ಉತ್ತಮ ಭವಿಷ್ಯವಾಣಿಯಾಗಿ!
ಇರಬೇಕು ಸಾಧಿಸುವ ಛಲ, ಯಶಸ್ಸಿನ ಬೆಲೆ
ಅನುರವಿಸಲಿ ಪ್ರೀತಿ ಹಂಚುವ ಭಾವದೋಕುಳಿ…

ಮಣ್ಣಿನಿಂದ ಹಣತೆ, ಬೀಜದಿಂದ ಎಣ್ಣೆ
ಹತ್ತಿಯ ಗಿಡದಿಂದ ಬತ್ತಿ ತಾನುರಿದು
ತಿಮಿರವನೋಡಿಸುವ ಅಗ್ನಿ ಬೆಳಕಾಗಿ..
ದಾನವನ ಮೋಸ ವಂಚನೆಯ ದಮನಜ್ವಾಲೆಯಾಗಿ!
ಇರಲೊಂದು ನೆಲೆಯು, ನೆಮ್ಮದಿಯ ಹೊನಲು
ಬೆಳಗುತಿರು ನೀ ನನ್ನೀ ಮನದ ಬಣ್ಣದೋಕುಳಿ…


ಶ್ರೀಮತಿ ಸರಿತಾ ಪ್ರವೀಣ್
ರೋಟರಿ ಪದವಿ ಪೂರ್ವ ಕಾಲೇಜು ಸುಳ್ಯ