ಸುಳ್ಯ: ಕೆ ಎಫ್ ಡಿ ಸಿ ಕಾರ್ಮಿಕರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಅಧಿಕಾರಿಗಳ ಭೇಟಿ

0

ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ತೋಟ ತೊಳಿಲಾಲರ್ ಸಂಘದ ವತಿಯಿಂದ ನ. 6 ರಂದು ಸುಳ್ಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿ ಮುಂಭಾಗ ನಡೆದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಕೆ ಎಫ್ ಡಿ ಸಿ ಅಧಿಕಾರಿ ಆಗಮಿಸಿ ಕಾರ್ಮಿಕರಿಗೆ ಉಂಟಾಗಿರುವ ಸಮಸ್ಯೆಯನ್ನು ಆಲಿಸಿ ಸ್ಪಂಧಿಸುವ ಭರವಸೆಯನ್ನು ನೀಡಿದ ಬಳಿಕ ಸಂಘಟಕರು ಪ್ರತಿಭಟನೆಯನ್ನು ಹಿಂಪಡೆದು ಕ್ಕೊಂಡರು.

ಮಂಗಳೂರು ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಂದಗೋಪಾಲ್ ರವರು ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ಬೇಡಿಕೆಗಳನ್ನು ಆಲಿಸಿ ಸಂಘಟನೆಯ ಮುಖಂಡರಿಂದ ಮನವಿಯನ್ನು ಸ್ವೀಕರಿಸಿ ಮಾತನಾಡಿ ಅತಿ ಶೀಘ್ರವಾಗಿ ರಬ್ಬರ್ ತೋಟದಲ್ಲಿರುವ ಕಾಡುಗಳನ್ನು ಕಡಿಯುವ ಕೆಲಸವನ್ನು ಪ್ರಥಮವಾಗಿ ಮಾಡಲಾಗುತ್ತದೆ. ಬಳಿಕ ರಬ್ಬರ್ ಮರಗಳಿಗೆ ಗೊಬ್ಬರವನ್ನು ಹಾಕುವ ಕೆಲಸವನ್ನು ಮಾಡಲಾಗುವುದು.

ಉಳಿದಂತೆ ಕಾರ್ಮಿಕರಿಗೆ ಉಂಟಾಗಿದೆ ಎನ್ನಲಾದ ಮೂಲಭೂತ ಸಮಸ್ಯೆಗಳ ಬಗ್ಗೆ ಇದೇ ಬರುವ 10ನೇ ತಾರೀಖಿನಂದು ಇಲಾಖೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುಳ್ಳಕ್ಕೆ ಬರುತ್ತಿದ್ದು ಆ ಸಂದರ್ಭದಲ್ಲಿ ಅವರೊಂದಿಗೆ ಸಂಘಟಕರನ್ನು ಮತ್ತು ನಾಯಕರುಗಳನ್ನು ಭೇಟಿಯಾಗುವ ಮತ್ತು ಸಮಸ್ಯೆಗಳನ್ನು ಹೇಳಿಕೊಳ್ಳುವ ಕಾಲಾವಕಾಶವನ್ನು ಮಾಡಿಕೊಡಲಾಗುವುದು ಎಂದು ಭರವಸೆಯನ್ನು ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಗಮಿಸಿ ಕಾರ್ಮಿಕರ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡರು.ಬಳಿಕ ಪ್ರತಿಭಟನೆಗೆ ಸಾಥ್ ನೀಡಿದ ಅವರು ಕಾರ್ಮಿಕರಿಗೆ ಅನ್ಯಾಯವಾಗುವುದು ಸರಿಯಲ್ಲ.ನಿಮ್ಮ ಬೇಡಿಕೆಗಳು ಏನಿದೆ ಅದು ನಿಮಗೆ ಸಿಗಬೇಕಾದ ಹಕ್ಕುಗಳಾಗಿದೆ.ಆದ್ದರಿಂದ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯವನ್ನು ತುಂಬಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್,ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ ಎಸ್ ಗಂಗಾಧರ್,ಕೆ ಗೋಕುಲ್ ದಾಸ್, ಮುಖಂಡರುಗಳಾದ ನಂದರಾಜ್ ಸಂಕೇಶ್ ಮೊದಲಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಸುಳ್ಯ ತಾಲೂಕು ತೋಟ ತೊಳಿಲಾಲರ್ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಚಂದ್ರಲಿಂಗಂ ರವರ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಸುಳ್ಯ ಘಟಕದ ರಬ್ಬರ್ ತೋಟಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ತೋಟಗಳಲ್ಲಿ ಕೆಲಸ ಮಾಡುವ ಸಮಯ ಕಳೆ ಗಿಡ ಗಂಟಿಗಳ ಸಮಸ್ಯೆ, ಕಾಡುಪ್ರಾಣಿಗಳ ಹಾವಳಿ, ರಸಗೊಬ್ಬರದ ಸಮಸ್ಯೆ, ರಬ್ಬರ್ ಮರಗಳಿಗೆ ಔಷದಿ ಸಿಂಪಡನೆ ಮಾಡದಿರುವುದು, ಕಾರ್ಮಿಕರಿಗೆ ಬೋನಸ್ ನೀಡದಿರುವುದು,ವೇತನ ತಾರತಮ್ಯ ಮುಂತಾದ ಸಮಸ್ಯೆಗಳನ್ನು ಸರಿ ಪಡಿಸುವಂತೆ ಬೇಡಿಕೆಯನ್ನು ಇಟ್ಟು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.