ಮತದಾರರ ಸಮಯ ಮತ್ತು ಚುನಾವಣೆಯ ಖರ್ಚು ಗಮನಿಸಿ ನಾಮಪತ್ರ ವಾಪಾಸ್
ಕೊಲ್ಲಮೊಗ್ರ ಗ್ರಾಮ ಕಾಂಗ್ರೆಸ್ ಸಮಿತಿ ಹೇಳಿಕೆ
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಂಟು ಸ್ಥಾನದಲ್ಲಿ ಎಂಟರಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಬೆಂಬಲಿತರ ಆಡಳಿತ ಮಂಡಳಿಯಲ್ಲಿ ವಾರ್ಡ್ ನಂಬರ್ 1 ರ ಸದಸ್ಯರಾಗಿದ್ದ ಉದಯ ಕೊಪ್ಪಡ್ಕ ಅವರು ಆಡಳಿತ ಸಮಿತಿ ಒಳಗಿನ ಹೊಂದಾಣಿಕೆಯ ಕೊರತೆಯಿಂದಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಆದ್ದರಿಂದ ಇದೀಗ ಉಪ ಚುನಾವಣೆ ಎದುರಿಸುವ ಪರಿಸ್ಥಿತಿ ಬಂದಿದೆ. ಉಪ ಚುನಾವಣೆ ಘೋಷಣೆಯಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪದ್ಮಯ ಕೊಂದಾಳ ನಾಮಪತ್ರ ಸಲ್ಲಿಸಿದ್ದರು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಡಳಿತ ಸಮಿತಿಯು ಸಂಪೂರ್ಣ ನಿಷ್ಕ್ರಿಯವಾಗಿದ್ದು ಮತ್ತು ಅವರುಗಳ ತಪ್ಪು ನಿರ್ಧಾರದಿಂದ ಉಪ ಚುನಾವಣೆ ನಡೆಯುತ್ತಿದ್ದು ಮತದಾರ ಬಂಧುಗಳಿಗೆ ಆಗುವ ಸಮಯ ವ್ಯರ್ಥ ಮತ್ತು ಖರ್ಚು ವೆಚ್ಚಗಳ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ಅಭ್ಯರ್ಥಿ ನಾಮಪತ್ರ ಹಿಂತೆಗೆದುಕೊಂಡಿರುವುದಾಗಿ ಕೊಲ್ಲಮೊಗ್ರು ಗ್ರಾಮ ಸಮಿತಿ ತಿಳಿಸಿದೆ.
ಕರ್ನಾಟಕ ರಾಜ್ಯ ಸಚಿವ ಸಂಪುಟವು ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರೂ, ಕೇಂದ್ರ ಸರಕಾರಕ್ಕೆ ಸಂಸದರುಗಳ ಮೂಲಕ ಒತ್ತಡ ಹಾಕಿ ಜನ ವಿರೋಧಿ ಕಸ್ತೂರಿರಂಗನ್ ವರದಿ ಯನ್ನು ರದ್ದುಪಡಿಸುವಂತೆ ಒತ್ತಾಯಿಸುವುದನ್ನು ಬಿಟ್ಟು, ರಾಜಕೀಯ ಪಕ್ಷಗಳಲ್ಲಿ ಹುದ್ದೆಗಳನ್ನು ಅಲಂಕರಿಸಿಕೊಂಡು ರಾಜಕೀಯ ಪ್ರೇರಿತ ಪ್ರತಿಭಟನೆ ಮಾಡುವುದು ಸರಿಯಲ್ಲ. ಯಾವುದೇ ಪಕ್ಷದ ಪ್ರತಿನಿಧಿಯಾಗಿರದೇ ಪಕ್ಷಾತೀತವಾಗಿ ಹೋರಾಟ ಮಾಡಿದ್ದಲ್ಲಿ ಈ ಹಿಂದೆ ಬೆಂಬಲ ನೀಡಿದಂತೆ ಮುಂದೆಯೂ ಸಹಕರಿಸುತ್ತೇವೆ . ಈ ಎರಡು ವಿಚಾರಗಳ ಅನ್ವಯ ಗ್ರಾಮ ಸಮಿತಿಯ ನಾಯಕರುಗಳ ಶಿಫಾರಸಿನಂತೆ ಈ ಚುನಾವಣಾ ಸ್ಪರ್ಧಾ ಕಣದಿಂದ ನಾಮಪತ್ರವನ್ನು ಹಿಂದೆ ತೆಗೆದುಕೊಳ್ಳುತ್ತಿದ್ದು ಮುಂದಿನ ಚುನಾವಣೆಗಳನ್ನು ನಾವು ಸ್ಪರ್ಧಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಕೊಲ್ಲಮೊಗ್ರ ಗ್ರಾಮದ ಒಂದನೇ ವಾರ್ಡಿನ ಮತದಾರ ಬಾಂಧವರಿಗೆ ಕೊಲ್ಲಮೊಗ್ರು ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಣಿಕಂಠ ಕೊಳಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.