ಹಿರಿಯ ವಕೀಲ, ಲೇಖಕ ವಿದ್ಯಾಧರ ಬಡ್ಡಡ್ಕ ಬಂಧನ– ಬಿಡುಗಡೆ
ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿವಾದಿತ ಪೋಸ್ಟ್ ಒಂದಕ್ಕೆ ಸಂಬಂಧಿಸಿ ಹಿರಿಯ ಲೇಖಕ, ವಕೀಲ ವಿದ್ಯಾಧರ ಬಡ್ಡಡ್ಕ ಅವರನ್ನು ಸುಂಟಿಕೊಪ್ಪ ಪೊಲೀಸರು ನಿನ್ಬೆ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ವಿವಾದಿತ ಪೋಸ್ಟ್ ನಲ್ಲಿ “ಜನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಬ್ರಿಟಿಷರ ಬೂಟು ನೆಕ್ಕಿದವರು” ಎಂದು ಶ್ರೀವತ್ಸ ಭಟ್ ಎಂಬವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆಯಲಾಗಿತ್ತು.
ಈ ಪೋಸ್ಟ್ ಕುರಿತು ಕೊಡಗಿನಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೋಲೀಸರು, ಶ್ರೀವತ್ಸ ಭಟ್ ಎಂಬ ನಕಲಿ ಖಾತೆಯ ಮೂಲಕ ವಿದ್ಯಾಧರ ರವರು ಆ ಪೋಸ್ಟ್ ಹಾಕಿದ್ದಾರೆಂದು ಕಂಡುಕೊಂಡು ವಿದ್ಯಾಧರ ಬಡ್ಡಡ್ಕ ಅವರನ್ನು ವಿಚಾರಣೆ ನಡೆಸಿ ಶುಕ್ರವಾರ ರಾತ್ರಿ ಬಂಧಿಸಿದರು.
ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ , ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಮೊದಲಾದವರು ಆಗ್ರಹಿಸಿದ್ದರು.
ಸಮಾಜದ ಎಲ್ಲ ಕಡೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೊಡಗು ಎಸ್.ಪಿ.ಯವರು, ಆ ರೀತಿ ಪೋಸ್ಟ್ ಹಾಕಿದ ಶ್ರೀವತ್ಸ ಭಟ್ ಯಾರೆಂದು ಕಂಡುಹಿಡಿಯಲು ಸೂಚಿಸಿದರು. ತನಿಖೆ ಆರಂಭಿಸಿದ ಪೋಲೀಸರು ವಿದ್ಯಾಧರ ಬಡ್ಡಡ್ಕರವರು ಶ್ರೀವತ್ಸ ಭಟ್ ಎಂಬ ಫೇಕ್ ಅಕೌಂಟ್ ಸೃಷ್ಟಿಸಿ ಆ ಪೋಸ್ಟ್ ಹಾಕಿದ್ದರೆಂದು ಕಂಡುಕೊಂಡರೆನ್ನಲಾಗಿದೆ.
ಆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ವಿದ್ಯಾಧರರನ್ನು ಮಡಿಕೇರಿ ಪೋಲೀಸರು ಬಂಧಿಸಿದರೆಂದು ತಿಳಿದುಬಂದಿದೆ.
ಸೆಕ್ಷನ್ 192, 353 (2) 319 ಬಿ.ಎನ್.ಸಿ.ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿ ಜಾಮೀನಿನ ಮೇಲೆ ರಾತ್ರಿಯೇ ಬಿಡುಗಡೆ ಮಾಡಿರುವುದಾಗಿ
ತಿಳಿದು ಬಂದಿದೆ.