ಡಿ.4ರಂದು ಸುಳ್ಯದಲ್ಲಿ ಪಂಚಾಯತ್ ರಾಜ್ ಸಮಾವೇಶ

0

ಗ್ರಾ.ಪಂ. ಗಳು ಎದುರಿಸುವ ಸಮಸ್ಯೆಗಳು ಶಾಸಕರ ಮುಂದೆ ಮಂಡಿಸಿ, ಪರಿಹಾರ ಕಂಡುಕೊಳ್ಳಲು ಸಂವಾದ

ಗ್ರಾಮ ಪಂಚಾಯಿತಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಂದ ಆಯ್ಕೆಯಾದ ಅವಿಭಜಿತ ದ. ಕ. ಜಿಲ್ಲೆಯ ಎರಡು ವಿಧಾನ ಪರಿಷತ್ತಿನ ಸದಸ್ಯರು ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರೊಂದಿಗೆ ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಸದಸ್ಯರೊಳಗೂಡಿ ಚರ್ಚಿಸಲು ಡಿ. 4 ರಂದು ಬುಧವಾರ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ರಾಜ್ ಸಮಾವೇಶ ನಡೆಯಲಿದೆ ಎಂದು ಸುಳ್ಯ ತಾಲೂಕು ಗ್ರಾಮ ಪಂಚಾಯಿತ್ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಶೈಲೇಶ್ ಅಂಬೇಕಲ್ಲು ರ್ಹೇಳಿದರು.

ನ.30ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿಗಳು ಅನುದಾನದ ಕೊರತೆಗಳಿಂದ ಹಲವು ಸಮಸ್ಯೆಗಳಾಗುತ್ತಿದೆ. ಇವುಗಳ ಬಗ್ಗೆ ಕ್ಷೇತ್ರದ ಶಾಸಕರು ಹಾಗೂ ಸ್ಥಳೀಯ ಪ್ರತಿನಿಧಿಗಳಿಂದ ಚುನಾಯಿತರಾದ ಎಂ.ಎಲ್.ಸಿ.ಗಳೊಂದಿಗೆ ಚರ್ಚೆ ನಡೆಸಲು ಒಕ್ಕೂಟ ನಿರ್ಧರಿಸಿದೆ. ಸಮಾವೇಶದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಎಲ್ಲಾ ಪಂಚಾಯಿತಿಗಳ ಸದಸ್ಯರು ಭಾಗವಹಿಸಲಿದ್ದಾರೆ.


ಗ್ರಾ.ಪಂಗಳ ಪ್ರಮುಖ ಸಮಸ್ಯೆಗಳನ್ನು ಜನಪ್ರತಿನಿಧಿಗಳೊಂದಿಗೆ ಮಂಡಿಸಿ ಮುಂಬರುವ ಬೆಳಗಾವಿ ಆಧಿವೇಶನದಲ್ಲಿ ಪ್ರಸ್ತಾವಿಸಿ ಬಗೆಹರಿಸುವ ನಿಟ್ಟಿನಲ್ಲಿ ಹಕ್ಕೊಂತ್ತಾಯ ಮಂಡಿಸಲು ನಿರ್ಧರಿಸಲಾಗಿದೆ. ಗ್ರಾಮಪಂಚಾಯಿತಿಗಳಲ್ಲಿ, ಜಲಜೀವನ್ ಮಿಷನ್ ಕಾಮಗಾರಿಗಳು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಲೋಪದೋಷಗಳು, ಸಾಮಾಜಿಕ ಪರಿಶೋಧನೆಯ ಬಗ್ಗೆ ಮತ್ತು ಕೇರಳ ಮಾದರಿಯ ಯೋಜನೆ ರೂಪಿಸಲು ಕ್ರಮ, ಸಿಬ್ಬಂದಿ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ, ತಾಲೂಕಿನ ಅರ್ಧಕ್ಕಿಂತ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯತ್ ಅಭಿವೃದ್ಧಿಗಳ ಅಧಿಕಾರಿಗಳು ಇಲ್ಲದಿರುವುದು ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿಗಳ ಕೊರತೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಸಹಾಯಕ ಅಭಿಯಂತರರ ಕೊರತೆ, ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ, ಕುಡಿಯುವ ನೀರಿನ ವಿದ್ಯುತ್ ಬಿಲ್ಲುಗಳಿಗೆ ವಿನಾಯಿತಿ ಮತ್ತು ಗ್ರಾಮಪಂಚಾಯತ್ ಸದಸ್ಯರುಗಳು ಎದುರಿಸುತ್ತಿರುವ ಸಮಸ್ಯೆಗಳು ಸೇರಿ ಹಲವು ಸಮಸ್ಯೆಗಳನ್ನು ತಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಪ್ರಬಲವಾಗಿ ಮಂಡಿಸಲು ತೀರ್ಮಾನಿಸಲಾಗಿದೆ ಎಂದರು.

ತಾಲೂಕು ಒಕ್ಕೂಟದ ಸಂಚಾಲಕರಾದ ಮಹೇಶ್ ಕುಮಾರ್ ಕರಿಕ್ಕಳ ಮಾತನಾಡಿ “ಪಂಚಾಯತ್ ಗಳು ಬೇರೆ ಇರಬಹುದು. ಆದರೆ ಸಮಸ್ಯೆಗಳು ಎಲ್ಲಾ ಕಡೆಯೂ ಒಂದೇ.‌ ಈ ಸಮಸ್ಯೆ ಗಳನ್ನು ಒಟ್ಟಾಗಿ ಒಂದೊಂದು ವಿಚಾರದಲ್ಲಿ ಒಬ್ಬೊಬ್ಬರು ವಿಷಯವನ್ನು ಶಾಸಕರ ಮುಂದೆ ಇಡುತ್ತೇವೆ. ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದವರು ಹೇಳಿದರು.

ಪ್ರಧಾನ ಕಾರ್ಯದರ್ಶಿ ಕೇಶವ ಅಡ್ತಲೆಯವರು, ” ರಾಜ್ಯದಲ್ಲಿ ಸರಕಾರ ಯೋಜನೆ ಜಾರಿ ಮಾಡುವಾಗ ಬಯಲು ಸೀಮೆಯನ್ನು ದೃಷ್ಟಿಯಲ್ಲಿ ಇಟ್ಟು ಮಾಡುತ್ತಾರೆ. ಅದು ಇಲ್ಲಿ ಫಲಪ್ರವಾಗುವುದಿಲ್ಲ. ಅದಕ್ಕಾಗಿ ಇಲ್ಲಿ ಯೋಜನೆ ಬದಲಾಯಿಸಿ ಇಲ್ಲಿಗೆ ಹೇಗೆ ಬೇಕು ಅದನ್ನು ಮಾಡುವ ವ್ಯವಸ್ಥೆ ಬೇಕು. ಆ ನಿಟ್ಟಿನಲ್ಲಿ ಶಾಸಕರ ಮುಂದೆ ಅಹವಾಲು ಮಂಡಿಸಲಾಗುವುದು ಎಂದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಹರೀಶ್ ರೈ ಉಬರಡ್ಕ ಮಾತನಾಡಿ, ಹಿಂದೆ ಗ್ರಾ.ಪಂ. ಗಳಿಗೆ ತಾ.ಪಂ., ಜಿ.ಪಂ. ಅನುದಾನ ಬಂದು ಒಂದಷ್ಟು ಕೆಲಸಗಳು ಆಗುತಿತ್ತು. ಅದು ನಿಂತಿದೆ. ಆ ಅನುದಾನ ಜಿಲ್ಲಾ ಹಂತದಿಂದ ಪಂಚಾಯತ್ ಗಳಿಗೆ ಕೊಡುವ ವ್ಯವಸ್ಥೆ ಆಗಬೇಕು. ಸಿಬ್ಬಂದಿಗಳ ನೇಮಕ ಆಗಬೇಕು ಹೀಗೆ ಹಲವು ಸಮಸ್ಯೆಗಳಿವೆ ಎಂದು‌ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಐವರ್ನಾಡು ಗ್ರಾ.ಪಂ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಮರ್ಕಂಜ ಗ್ರಾ.ಪಂ ಅಧ್ಯಕ್ಷ ಗೀತಾ, ಬಾಳಿಲ ಗ್ರಾ.ಪಂ ಸದಸ್ಯ ರವೀಂದ್ರ ರೈ ಉಪಸ್ಥಿತರಿದ್ದರು.