ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈ ಬಾರಿಯ ಚುನಾವಣೆಗೆ ನೂತನವಾಗಿ ರೂಪಿಸಲ್ಪಟ್ಟಿರುವ ಸಮನ್ವಯ ಸಹಕಾರಿ ಬಳಗದ ಸದಸ್ಯರುಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಸಂಪಾಜೆ ಸೊಸೈಟಿ ಮಾಜಿ ಅಧ್ಯಕ್ಷ ಜಗದೀಶ್ ಕೆ.ಪಿ. ತಿಳಿಸಿದ್ದಾರೆ.
ನ.30 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು “ಸುಳ್ಯ ತಾಲೂಕಿನ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಶತಮಾನದ ಸಂಭ್ರಮವನ್ನು ಅನುಭವಿಸಿದೆ.
ಆದರೆ ಸಂಪಾಜೆ ಸೊಸೈಟಿಯ ಆಡಳಿತ ಮಂಡಳಿಯವರು ಅರ್ಹ ಮತದಾರರು ಮತ್ತು ಅನರ್ಹ ಮತದಾರರ ತುಲನೆಯ ಆಧಾರದಲ್ಲಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ನಿರ್ವಹಣೆಯಲ್ಲಿ ಅತ್ಯಂತ ಕಳಪೆ ಎಂಬುದು ಜಗಜ್ಜಾಹೀರಾಗಿದೆ.
ಏಕವ್ಯಕ್ತಿ ಧೋರಣೆಯ ಮೂಲಕ ಪ್ರಾ.ಕೃ.ಪ.ಸ.ಸಂಘ ದ ಅಧ್ಯಕ್ಷರು ಸಂಪಾಜೆ ಹಾಲು ಸೊಸೈಟಿ ಅಧ್ಯಕ್ಷ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ, TAPCMS ನಿರ್ದೇಶಕ, ಕಾಂಗ್ರೆಸ್ಸಿನ ಸಂಪಾಜೆ ವಲಯಾಧ್ಯಕ್ಷ ಹೀಗೆ ಎಲ್ಲಾ ಹುದ್ದೆಗಳನ್ನು ಹೊಂದಿಕೊಂಡಿದ್ದಾರೆ.
ಚಾಲ್ತಿ ಆಡಳಿತ ಮಂಡಳಿ ನಿರ್ದೇಶಕರ ಮನೆಯ ಸದಸ್ಯರೆಲ್ಲರೂ ಮತದಾನದ ಅರ್ಹತೆಯನ್ನು ಹೊಂದಿದ್ದಾರೆ. ಆದರೆ “ಸಂ ಪ್ರಾ ಕೃ ಪ ಸ ಸಂಘ “ದ ಬಹುಮಂದಿ ಸಹಕಾರಿಗಳು ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿಯುವಂತಾಗಿದೆ. ಇದರ ಹಿಂದೆ ಸ್ವಜನ ಪಕ್ಷಪಾತ, ಸ್ವಹಿತಾಸಕ್ತಿ ಅಡಗಿದೆ. ಸಹಕಾರಿ ತತ್ವ ವನ್ನು ಕಡೆಗಣಿಸಲಾಗಿದೆ.
ಸ್ವಹಿತಾಸಕ್ತಿ ಮತ್ತು ಸ್ವಜನ ಪಕ್ಷಪಾತದಿಂದಾಗಿ ಗ್ರಾಮದ ಅನೇಕ ಮಂದಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸವಲತ್ತುಗಳಿಂದ ವಂಚಿಸಲಾಗಿದೆ.
‘ಸಹಕಾರಿ ರಂಗ’ದಲ್ಲಿ ಯಾವುದೇ ಒಬ್ಬ ಸದಸ್ಯ ಕೇವಲ ಒಂದು ಪಾಲನ್ನು ಪಡೆದು ನಿರ್ದೇಶಕನಾಗಿ, ಅಧ್ಯಕ್ಷನಾಗಬಹುದು. ಬಡವ – ಬಲ್ಲಿದ, ಅಕ್ಷರಸ್ಥ – ಅನಕ್ಷರಸ್ಥ, ಜಾತಿ – ಮತ ಎಂಬ ಬೇಧವಿಲ್ಲದೇ ಎಲ್ಲರಿಗೂ ಸಮಾನ ಅವಕಾಶವಿದೆ. ಕುಟುಂಬ ಸದಸ್ಯನಂತೆ ‘ ಸಹಕಾರಿ ಸಂಸ್ಥೆ’ಯಲ್ಲಿ ಸಮಾನ ಅಧಿಕಾರ ಮತ್ತು ಸಂಪತ್ತಿನ ಒಡೆತನ ಇರುತ್ತದೆ.
ಆದರೆ ಸಂಪಾಜೆ ಪ್ರಾ. ಕೃ. ಪ. ಸ. ಸಂಘ ‘ದ ಸದಸ್ಯ ಆಧರಿತವಾಗದೇ ವ್ಯಕ್ತಿ ಆಧರಿತವಾಗಿದೆ. ‘ ಪ್ರಶ್ನಾತೀತ ನಾಯಕ ‘ ಸಹಕಾರಿ ರಂಗದಲ್ಲಿ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ಬದಲಾವಣೆ ಬಯಸಿ ಈ ಬಾರಿ ಸಮನ್ವಯ ಸಹಕಾರಿ ಬಳಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಿದೆ. ನಮ್ಮ ಎಲ್ಲಾ ಸದಸ್ಯರು ಜಯ ಗಳಿಸುವ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸದಸ್ಯರು ಗಳಾದ ಜಗನ್ನಾಥ ಪಿ.ವಿ., ಚಂದ್ರವಿಲಾಸ ಗೂನಡ್ಕ , ಶಿವಪ್ರಸಾದ ಗೂನಡ್ಕ , ನಾಗೇಶ ಪೇರಾಲು , ಯು.ಪಿ.ರವೀಂದ್ರ , ಸದಾನಂದ ರೈ ,
ಎಸ್.ಪಿ.ಲೋಕನಾಥ , ವರದರಾಜ ಎಸ್.ಟಿ.,ಧನಪಾಲ ಗೂನಡ್ಕ, ಮನೀಶ ಗೂನಡ್ಕ , ವಿಜಯ ಆಲಡ್ಕ ,
ಶಾಜಿ ಮಾಧವನ್ ಉಪಸ್ಥಿತರಿದ್ದರು.