ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಪನ್ನ

0

ಕಾರ್ತಿಕ ಮಾಸದ ಒಂದು ತಿಂಗಳು ನಿರಂತರವಾಗಿ ನಡೆದ ದೀಪೋತ್ಸವಕ್ಕೆ ಭಜನಾ ಸೇವೆಯ ಮೆರಗು

ಸುಳ್ಯದ ಗ್ರಾಮ ದೇವಸ್ಥಾನವಾದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಒಂದು ತಿಂಗಳ ಕಾಲ ನಿರಂತರವಾಗಿ ನಡೆದ ದೀಪೋತ್ಸವವು ಡಿ.1ರಂದು ಸಂಪನ್ನಗೊಂಡಿದ್ದು, ಕಾರ್ತಿಕ ದೀಪೋತ್ಸವಕ್ಕೆ ಭಜನೆಯು ಮೆರಗು ತಂದಿದೆ.

ನ.2ರಂದು ಸಂಜೆ ದೇವಸ್ಥಾನದ ಪ್ರಧಾನ ಅರ್ಚಕ ನೀಲಕಂಠ ಭಟ್ ಅವರ ನೇತೃತ್ವದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ‌ನೀಡಿಲಾಯಿತು. ಆ ಬಳಿಕ ನಿರಂತರವಾಗಿ ಸಂಜೆ ವೇಳೆ ನಡೆದ ದೀಪೋತ್ಸವಕ್ಕೆ ಪ್ರತಿದಿನ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನೆರವೇರಿತು.
ಡಿ.1ರಂದು ಅಪರಾಹ್ನ ನಡೆದ ದೀಪೋತ್ಸವ ಸಂಪನ್ನ ಕಾರ್ಯಕ್ರಮದ ಅಂಗವಾಗಿ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ನಾಲ್ಕೈದು ಭಜನಾ ತಂಡಗಳಿಂದ ವಿಶೇಷ ಭಜನಾ ಸೇವೆ ನಡೆಯಿತು.

ಶ್ರೀ ಮಹಾವಿಷ್ಣು ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾತ್ರಿ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

ಕಾರ್ತಿಕ ದೀಪೋತ್ಸವ ಪ್ರಯುಕ್ತ ಸುಮಾರು ನಲವತ್ತು ಭಜನಾ ತಂಡಗಳಿಂದ ಭಜನಾ ಸೇವೆ, ವಿವಿಧ ದಾನಿಗಳಿಂದ ಹಾಗೂ ಸಂಘ ಸಂಸ್ಥೆಗಳಿಂದ ಫಲಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು. ಪ್ರತೀ ಶನಿವಾರ ಮತ್ತು ಆದಿತ್ಯವಾರ ರಾತ್ರಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಬೈಲುವಾರು ಸಮಿತಿಯವರು ಸ್ವಯಂಸೇವಕರಾಗಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕ ನೀಲಕಂಠ ಭಟ್, ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್. ಕಾರ್ತಿಕ ದೀಪೋತ್ಸವ ಸಮಿತಿ ಸಂಚಾಲಕ ಚಂದ್ರಶೇಖರ ಅಡ್ಪಂಗಾಯ, ಸೇವಾ ಸಮಿತಿ ಸಂಚಾಲಕ ನವೀನ ಕುದ್ಪಾಜೆ, ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರುಹಳಾದ ನಾರಾಯಣ ಕೇಕಡ್ಕ, ಪಿ.ಕೆ. ಉಮೇಶ್, ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರುಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.