ಸೇವಾಜೆ ಎಂಬಲ್ಲಿ ಬಿದಿರಿನ ಹಿಂಡಲಿನಲ್ಲಿ ತಲೆಬುರುಡೆ ಮತ್ತು ಬಟ್ಟೆ ಕಾಣಸಿಕ್ಕಿದ್ದು, ಇದು ಕಳೆದ ಕೆಲ ತಿಂಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಸೇವಾಜೆಯ ಬೆಳ್ಯಪ್ಪ ಗೌಡ ಅವರ ತಲೆ ಬುರುಡೆ ಎಂದು ಹೇಳಲಾಗುತ್ತಿದೆ.
ಸೇವಾಜೆಯ ಬೆಳ್ಯಪ್ಪ ಗೌಡ (85 ವರ್ಷ) ಎಂಬವರು ಸೆ.9ರಂದು ಮನೆಯಿಂದ ಮಧ್ಯಾಹ್ನದ ವೇಳೆ ಹಠಾತ್ ನಾಪತ್ತೆಯಾಗಿದ್ದರು. ಎಲ್ಲಿ ಹೋದರು ಅನ್ನುವುದೇ ಯಾರಿಗೂ ಗೊತ್ತಿರಲಿಲ್ಲ. ಈ ಬಗ್ಗೆ ಎಲ್ಲ ಕಡೆ ಹುಡುಕಾಟ ನಡೆದಿದ್ದರೂ ನಿಗೂಢವಾಗಿ ಕಾಣೆಯಾದ ಬೆಳ್ಯಪ್ಪ ಅವರ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಸುಳ್ಯದ ಪ್ರಗತಿ ಆಂಬ್ಯುಲೆನ್ಸ್ ಚಾಲಕ ಅಚ್ಚು, ಮುತ್ತಪ್ಪನ್ ಆಂಬ್ಯುಲೆನ್ಸ್ ಚಾಲಕ ಅಭಿಲಾಷ್ ಹಾಗೂ ಶೌರ್ಯ ವಿಪತ್ತು ದಳದ ಚಿದಾನಂದ ಮೂಡನಕಜೆ ಹಾಗೂ ಸ್ಥಳೀಯರು ಸೇರಿ ನಿರಂತರವಾದ ಹುಡುಕಾಟದಲ್ಲಿ ನಡೆಸಿದ್ದರು.
ಆದರೆ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಈ ಬಗ್ಗೆ ಜ್ಯೋತಿಷ್ಯರ ಮೊರೆಯೂ ಹೋಗಿದ್ದರು. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಮಗ ಸುಬ್ರಹ್ಮಣ್ಯ ರವರು ನೀಡಿದ ದೂರು ಕೂಡ ದಾಖಲಾಗಿತ್ತು.
ಇದೀಗ ಸುಬ್ರಹ್ಮಣ್ಯ ರ ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಬಿದಿರ ಹಿಂಡಿಲಿನಲ್ಲಿ ತಲೆ ಬುರುಡೆ ಮತ್ತು ಬಟ್ಟೆ ದೊರೆತಿದ್ದು ಇದು ಬೆಳ್ಯಪ್ಪ ಗೌಡರದ್ದೆ ಆಗಿರಬಹುದು ಎಂದು ನಂಬಲಾಗಿದೆ. ಆದರೆ ಈ ಭಾಗದಲ್ಲಿ ಎಷ್ಟೆ ಹುಡುಕಾಟ ನಡೆಸಿದ್ದರೂ ಪತ್ತೆಯಾಗದೇ, ಮೂರು ತಿಂಗಳ ಬಳಿಕ ಇದೇ ಭಾಗದಲ್ಲಿ ಪತ್ತೆಯಾಗಿರುವುದು ಅತ್ಯಂತ ಕುತೂಹಲಕ್ಕೆ ಕಾರಣವಾಗಿದೆ.